ದಿನೇಶ್ ಅಮೀನ್ ಮಟ್ಟು
ಪ್ರತಿಭಾ ಕುಳಾಯಿ ಎಂಬ ದಕ್ಷಿಣ ಕನ್ನಡದ ಹೋರಾಟದ ಹೆಣ್ಣುಮಗಳ ಬಗ್ಗೆ ತನ್ನನ್ನು ‘ಹಿಂದೂ ಸಂಸ್ಕೃತಿ’ಯ ಕಾವಲುಗಾರನೆಂದು ಹೇಳಿಕೊಳ್ಳುತ್ತಿರುವ ಶ್ಯಾಮಸುಂದರ ಭಟ್ ಎಂಬ ಬೇವರ್ಸಿ ಬಾಯಲ್ಲಿ ಭೇದಿ ಮಾಡಿಕೊಂಡಿದ್ದಾನೆ. ಇದೇ ವೇಳೆ ಭೂತಾರಾಧನೆಯ ಸಂಸ್ಕೃತಿ ಹಿಂದೂ ಸಂಸ್ಕೃತಿ ಹೌದೋ ಅಲ್ಲವೋ ಎನ್ನುವುದರ ಬಗ್ಗೆ ಬಿರುಸಿನ ಚರ್ಚೆಯೂ ನಡೆಯುತ್ತಿದೆ.
ನಾನೊಂದು ಭೂತದ ಕತೆ ಹೇಳುತ್ತೇನೆ, ಆ ಮೇಲೆ ಯಾವುದು, ಯಾರ ಸಂಸ್ಕೃತಿ ಎನ್ನುವುದನ್ನು ನೀವೇ ತೀರ್ಮಾನ ಹೇಳಿಬಿಡಿ.
ತುಳುನಾಡಿನ ಪ್ರಮುಖ ಸ್ತ್ರೀ ದೈವಗಳಲ್ಲಿ ತನಿಮಾನಿಗಕ್ಕೆ ವಿಶೇಷವಾದ ಸ್ಥಾನ ಇದೆ. ಜೋಡಿ ಆರಾಧನೆ ಪಡೆಯುವ ಕೋಟಿ-ಚೆನ್ನಯ, ಕೊರಗ-ತನಿಯ, ಅಬ್ಬಗ-ದಾರಗ, ಕಲ್ಲುರ್ಟಿ-ಕಲ್ಕುಡಗಳಂತೆ ಕೋರ್ದಬ್ಬು-ತನಿಮಾನಿಗ ಕೂಡಾ ವಿಶೇಷ ಅಣ್ಣ-ತಂಗಿಯ ಜೋಡಿ ದೈವಗಳು.
ಇತಿಹಾಸದ ಪ್ರಕಾರ ತನಿಮಾನಿಗ ಪರಿಶಿಷ್ಟ ಜಾತಿಗೆ ಸೇರಿರುವ ಮುಗೇರ ಸಮುದಾಯಕ್ಕೆ ಸೇರಿದ ಬಂಡಾಯಗಾರ್ತಿ ಹೆಣ್ಣು. ಈಕೆಯ ಸಾಕುತಾಯಿ ಸೋಯಿ ಬೈದೆತಿ (ಬಿಲ್ಲವ). ಕೆಲವು ಪಾಡ್ದನಗಳ ಪ್ರಕಾರ ಈಕೆ ಕೋಟಿ-ಚೆನ್ನಯರ ಜೊತೆ ಬೆಳೆದ ಹೆಣ್ಣುಮಗಳು.
ಜೋಡಿ ಆರಾಧನೆಯಲ್ಲಿ ತನಿಮಾಣಿಗ ಜೊತೆ ಆರಾಧನೆ ಪಡೆಯುವ ಕೋಡ್ಡಬ್ಬು, ಮುಂಡಾಲ ಎಂಬ ಪರಿಶಿಷ್ಟ ಜಾತಿಗೆ ಸೇರಿದ ಇನ್ನೊಬ್ಬ ಬಂಡಾಯಗಾರ. ಕಚ್ಚೂರ ಮಾಲ್ದಿ ಎಂಬ ಮಾಯದ ಹೆಣ್ಣಿನ ಗರ್ಭದಲ್ಲಿ ಜನಿಸಿದ ಈತ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು ಬೆಳೆದವ. ಬಿಲ್ಲುವಿದ್ಯೆ, ಮಂತ್ರ ವಿದ್ಯೆ, ವೈದ್ಯವಿದ್ಯೆಯಲ್ಲಿ ಪಾರಂಗತನಾಗಿ ಆಟ,ಪಾಠ,ಕೂಟಗಳಲ್ಲಿ ಸದಾ ಗೆಲ್ಲುವ ವೀರನಾಗಿ ಬೆಳೆಯುತ್ತಿದ್ದ ಕೋಡ್ದಬ್ಬು ಮೇಲೆ ಊರಿನ ಅರಸರು ಮತ್ತು ಮಂತ್ರ-ತಂತ್ರವಾದಿಗಳ ಕೆಂಗಣ್ಣು ಬೀಳುತ್ತದೆ.
ಈತನನ್ನು ಹೇಗಾದರೂ ಮಾಡಿ ಹಣಿಯ ಬೇಕೆಂದು ನಿರ್ಧರಿಸಿದ ವಿಟ್ಲ ಮತ್ತು ಕದ್ರಿಯ ಅರಸರು ಷಡ್ಯಂತ್ರವನ್ನು ರೂಪಿಸಿ ಉಡುಪಿ ಸಮೀಪದ ಪಡುಬಿದ್ರಿಯ ಕಂಚಿನಡ್ಕದಲ್ಲಿ ಬಾವಿಯೊಳಗಿನ ನೀರಿನ ದಂಡು ಪರೀಕ್ಷಿಸಲು ಕೆಳಗಿಳಿಸಿ ಮೇಲೆ ಹಾಸುಕಲ್ಲು ಮುಚ್ಚಿ ಮರ ನೆಡುತ್ತಾರೆ. ಒಳಗಿದ್ದ ಕೋಡ್ದಬ್ಬು ಹೊರ ಬರಲಾಗದೆ ಕೋಳಿಯಾಗಿ, ಹುಲಿಯಾಗಿ ಬಗೆಬಗೆಯ ಪಕ್ಷಿ ಪ್ರಾಣಿಗಳಾಗಿ ಕೂಗುತ್ತಾ ಇರುತ್ತಾನೆ.
ಬೈದೆರ್ಲು ಮತ್ತು ಮುಗೆರುಲು ಗೆಳೆಯರ ಜೊತೆ ಬೇಟೆಗೆ ಬಂದಿದ್ದ ತನಿಮಾನಿಗಳಿಗೆ ಈ ಕೂಗು ಕೇಳುತ್ತದೆ. ತನಿಮಾನಿಗಳ ಒತ್ತಾಯಕ್ಕೆ ಮಣಿದು ಅವರೆಲ್ಲರೂ ಸೇರಿ ಬಾವಿ ಮೇಲಿನ ಹಾಸುಗಲ್ಲನ್ನು ಎತ್ತಲುಪ್ರಯತ್ನಿಸಿ ಸಾಧ್ಯವಾಗದೆ ಇದ್ದಾಗ ವಾಪಸು ಹೋಗುತ್ತಾರೆ.
ಆದರೆ ಅಲ್ಲಿಯೇ ಉಳಿದ ತನಿಮಾನಿಗ ನಂಬಿದದೈವ ಮತ್ತು ಹಿರಿಯರನ್ನು ಪಾರ್ಥಿಸಿ ಹಾಸುಗಲ್ಲನ್ನು ಕೈಯಲ್ಲಿದ್ದ ಗೆಜ್ಜೆತ್ತಿ (ಕತ್ತಿ)ಯಿಂದ ಗೀರಿ ಒಡೆದುಹಾಕುತ್ತಾಳೆ. ಆಗ ಒಳಗಿದ್ದ ಕೋಡ್ದಬ್ಬು “ನೀನು ನನಗಿಂತ ಮೊದಲು ಹುಟ್ಟಿದವಳಾದರೆ ಅಕ್ಕ, ನಂತರ ಹುಟ್ಟಿದವಳಾದರೆ ತಂಗಿ. ದಯವಿಟ್ಟು ನನ್ನನ್ನು ಬಾವಿಯಿಂದ ಮೇಲಕ್ಕೆ ಎತ್ತು’’ ಎಂದು ಪ್ರಾರ್ಥಿಸುತ್ತಾನೆ.
ಬಾವಿಯಿಂದ ಮೇಲಕ್ಕೆತ್ತಲು ಬೇರೇನು ದಾರಿ ಕಾಣದೆ ಇದ್ದಾಗ ತನಿಮಾನಿಗ ಉಟ್ಟಿದ್ದ ಸೀರೆಯನ್ನು ಬಿಚ್ಚಿ ಹಗ್ಗದ ರೀತಿ ಕೆಳಗೆ ಬಿಡುತ್ತಾಳೆ. ಅದಕ್ಕಿಂತ ಪೂರ್ವದಲ್ಲಿ ‘’ ಬಾವಿಯಿಂದ ಮೇಲೆ ಬರುವವರೆಗೆ ಆಕಾಶ ನೋಡಬಾರದು’ಎನ್ನುವ ಷರತ್ತು ಹಾಕುತ್ತಾಳೆ. ಒಪ್ಪಿಕೊಂಡ ಕೋರ್ದಬ್ಬು ಸೀರೆ ಹಿಡಿದು ಮೇಲೆ ಬರುತ್ತಾ ಇನ್ನೆಷ್ಟು ಮೇಲೆ ಬರಬೇಕೆಂದು ತಿಳಿದುಕೊಳ್ಳಲು ಕೊಟ್ಟ ವಚನ ಮರೆತು ಒಮ್ಮೆ ತಪ್ಪಿ ಮೇಲೆ ನೋಡುತ್ತಾನೆ. ಮೈಮೇಲೆ ಬಟ್ಟೆ ಇಲ್ಲದೆ ನಿಂತಿದ್ದ ತನಿಮಾನಿಗ ಈ ವಚನ ಭಂಗಕ್ಕಾಗಿ ಕೆಂಡಾಮಂಡಲವಾಗುತ್ತಾಳೆ.
ಸಿಟ್ಟಿನಿಂದ ನಡುಗುತ್ತಿದ್ದ ತನಿಮಾನಿಗ ಭೂಮಿಯ ಮೇಲೆ ಹದಿನಾರು ಗೆರೆಗಳನ್ನು ಎಳೆದು ಒಂದೊಂದು ಗೆರೆಗೆ ಒಂದೊಂದರಂತೆ ಹದಿನಾರು ತೊಟ್ಟು ನೆತ್ತರ ಗಡಿ ಕೊಡಬೇಕೆಂದು ಆತನ ತಪ್ಪಿಗೆ ಶಿಕ್ಷೆ ವಿಧಿಸುತ್ತಾಳೆ.
ಕೋಡ್ದಬ್ಬು ಒಪ್ಪಿ ತನ್ನ ನೆತ್ತಿಗೆ ಕತ್ತಿಯಿಂದ ಹೊಡೆದು ಕೊಂಡು ಹದಿನಾರು ತೊಟ್ಟು ರಕ್ತ ಕೊಡುತ್ತಾನೆ. “” ಇಂದಿನಿಂದ ನಾವು ಅಣ್ಣ ತಂಗಿಯರು, ನಾನು ಎಲ್ಲಿ ಇರುತ್ತೇನೋ ಅಲ್ಲಿ ನಿನಗೂ ಕಲ್ಲಗದ್ದುಗೆ ಇರುತ್ತದೆ, ಮೊದಲ ವೀಳ್ಯ ನಿನ್ನದು, ಕಲ್ಲಗದ್ದುಗೆಯಲ್ಲಿ ನೀನು ನನ್ನ ಬಲಭಾಗದಲ್ಲಿರುತ್ತಿ’ ಎಂದು ಕೋಡ್ದಬ್ಬು ಭಾಷೆ ಕೊಡುತ್ತಾನೆ.
ಕತೆ ಇಲ್ಲಿಗೆ ಮುಗಿಯುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಕೋಲ ನಡೆಯುವುದು ಬಹುಶಃ ಕೋಡ್ದಬ್ಬು-ತನಿಮಾನಿಗರದ್ದು. (ನಮ್ಮೂರಿನ ದೈವ ಕೂಡಾ ಕೋಡ್ದಬ್ಬು-ತನಿಮಾನಿಗ ಮತ್ತು ಜುಮಾದಿ-ಬಂಟ ಇತ್ತೀಚೆಗೆ ಗುಳಿಗನೂ ಸೇರಿಕೊಂಡಿದ್ದಾನೆ. ರಾತ್ರಿ ಸುಮಾರು 2-3 ಗಂಟೆಗೆ ತನಿಮಾನಿಗ ದರ್ಶನ ಶುರುವಾಗುತ್ತದೆ. ಸೇರಿದ್ದ ಭಕ್ತರು ಆಕೆಗೆ ಪೈಪೋಟಿಯಲ್ಲಿ ನೂರಾರು ಮಲ್ಲಿಗೆಯ ಮಾಲೆಗಳನ್ನು ಹಾಕುತ್ತಾರೆ. ಆ ಹೂಮಾಲೆಗಳ ಜೊತೆ ಆಟವಾಡುತ್ತಾ ನೃತ್ಯ ಮಾಡುತ್ತಿರುವ ತನಿಮಾನಿಗನನ್ನು ನೋಡುವುದೇ ಕಣ್ಣಿಗೆ ಹಬ್ಬ)
ಈ ಕೋಲ ಕಟ್ಟುವವರು ಪರಿಶಿಷ್ಟ ಜಾತಿಗೆ ಸೇರಿರುವ ನಲಿಕೆಯವರು. ಪ್ರತಿ ಕೋಡ್ದಬ್ಬು-ತನಿಮಾನಿಗ ಕೋಲದ ಕೊನೆಯ ಹಂತದಲ್ಲಿ ನೆತ್ತರ ಗಡಿ ಕೊಟ್ಟ ನಂತರವೇ ಕೋಲ ಕೊನೆಗೊಳ್ಳುವುದು. ತನಿಮಾನಿಗ ಪಾತ್ರಿ ನೆಲದಲ್ಲಿ ಹದಿನಾರು ಗೆರೆ ಹಾಕುತ್ತಾಳೆ, ಕೋಡ್ದಬ್ಬು ಪಾತ್ರಿ ತನ್ನ ಹಣೆಗೆ ಕತ್ತಿಯಿಂದ ಬಡಿದು ಹದಿನಾರು ತೊಟ್ಟು ನೆತ್ತರ ಅರ್ಪಿಸುತ್ತಾನೆ.
ತಮ್ಮ ಪೂರ್ವಿಕರಲ್ಲೊಬ್ಬ ದುರುದ್ದೇಶವಿಲ್ಲದೆ ಒಂದು ಹೆಣ್ಣಿನ ವಿಷಯದಲ್ಲಿ ಮಾಡಿದ ಒಂದು ಸಣ್ಣ ತಪ್ಪಿಗಾಗಿ ಈ ನಲಿಕೆಯ ಪಾತ್ರಧಾರಿಗಳು ಪ್ರತಿ ಕೋಲದಲ್ಲಿ ತನ್ನ ನೆತ್ತಿಯಿಂದ ಹದಿನಾರು ತೊಟ್ಟು ರಕ್ತ ಕೊಡುತ್ತಾನೆ.
ವರ್ಷಕ್ಕೆ ನೂರಾರು ಕೋಲಗಳಂತೆ ನೂರಾರು ವರ್ಷಗಳಿಂದ ಈ ಕೋಲ ನಡೆಯುತ್ತಾ ಬಂದಿದೆ. ಹೀಗಿದ್ದಾಗ ತಮ್ಮ ಪೂರ್ವಿಕರಲ್ಲೊಬ್ಬ ದುರುದ್ದೇಶವಿಲ್ಲದೆ ಒಂದು ಹೆಣ್ಣಿನ ವಿಷಯದಲ್ಲಿ ಮಾಡಿದ್ದ ಒಂದು ಸಣ್ಣ ತಪ್ಪಿಗೆ ಈ ನಲಿಕೆಯವರು ಇಲ್ಲಿಯ ವರೆಗೆ ಎಷ್ಟು ಸಾವಿರ ತೊಟ್ಟು ರಕ್ತ ಹರಿಸಿರಬಹುದು ಹೇಳಿ.
ಇದು ಹೆಣ್ಣಿನ ಗೌರವಕ್ಕೆ ಕುಂದು ಎಸಗಿದವನಿಗೆಗೆ ತನಿಮಾನಿಗ ಕೊಟ್ಟ ಶಿಕ್ಷೆ.
ಇದು ತುಳುನಾಡಿನ ಭೂತ-ದೈವಗಳ ಸಂಸ್ಕೃತಿ.
ಹೆಣ್ಣನ್ನು ಅವಾಚ್ಯ-ಅಶ್ಲೀಲ ಶಬ್ದಗಳಿಂದ ನಿಂದಿಸುವ, ಅಪಮಾನಿಸುವ, ರೇಪ್ ಮಾಡಬೇಕೆಂದು ಫರ್ಮಾನು ಹೊರಡಿಸುವವರಿಗೆ ಇದೇ ರೀತಿಯ ಶಿಕ್ಷೆ ವಿಧಿಸಬೇಕು.
ತುಳುನಾಡಿನ ಭೂತ-ದೈವಗಳ ಸಂಸ್ಕೃತಿ ಎನ್ನುವುದು ಹಿಂದೂ ಸಂಸ್ಕೃತಿ ಎಂದು ಸಾಬೀತು ಪಡಿಸಬೇಕು,ಸಾಧ್ಯವೇ?