Thursday, September 19, 2024
Google search engine
Homeಮುಖಪುಟತುಮಕೂರು ವಿವಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೆಂಗಿನ ಚಿಪ್ಪಿನಲ್ಲಿ ಆಹಾರ ವಿತರಣೆ -ಎಸ್ಎಫ್ಐ ಪ್ರತಿಭಟನೆ

ತುಮಕೂರು ವಿವಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೆಂಗಿನ ಚಿಪ್ಪಿನಲ್ಲಿ ಆಹಾರ ವಿತರಣೆ -ಎಸ್ಎಫ್ಐ ಪ್ರತಿಭಟನೆ

ತುಮಕೂರು ವಿಶ್ವವಿದ್ಯಾಲಯದಿಂದ ನಡೆಸುತ್ತಿರುವ ಸ್ನಾತಕೋತ್ತರ ಪದವಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ತೆಂಗಿನ ಚಿಪ್ಪಿನಲ್ಲಿ ಆಹಾರ ಬಡಿಸಿರುವ ಚಿತ್ರ ಸಾಕಷ್ಟು ವೈರಲ್ ಆಗಿದ್ದು, ಇದನ್ನು ಖಂಡಿಸಿ ಎಸ್.ಎಫ್.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕುಲಪತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಾಂಬಾರ್ ಬಡಿಸುವ ಸ್ಟೀಲ್ ಸೌಟ್ ನಾಪತ್ತೆಯಾಗಿದೆ ಎಂದು ಭಟ್ಟರು ತೆಂಗಿನ ಚಿಪ್ಪಿನಲ್ಲೇ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಸಾಂಬರು ಬಡಿಸಿದ್ದು ಇದೊಂದು ಅಮಾನವೀಯ ಘಟನೆಯಾಗಿದೆ. ವಿದ್ಯಾರ್ಥಿಗಳೆಂದರೆ ತಾತ್ಸಾರದ ಭಾವನೆ ಇದಾಗಿದೆ. ನಿಲಯ ಪಾಲಕರ ಗಮನಕ್ಕೆ ಬಂದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 22ರಂದು ಕುಲಸಚಿವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎಸ್ಎಫ್ಐ ಕಾರ್ಯಕರ್ತರು ವಿವಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದು ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ ಆಗ್ರಹಿಸಿದರು.

ವಿದ್ಯಾರ್ಥಿ ಗಳಿಗೆ ಗುಣಮಟ್ಟದ ಆಹಾರ ನೀಡುವುದು ಹಾಸ್ಟೆಲ್ ವಾರ್ಡನ್ ಗಳ ಕರ್ತವ್ಯವಾಗಿದೆ. ಆದರೆ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ತೆಂಗಿನ ಚಿಪ್ಪು ಬಳಸಿ ಆಹಾರ ನೀಡಿರುವುದು ಖಂಡನೀಯ. ಇದನ್ನು ನೋಡಿದರೆ ವಿದ್ಯಾರ್ಥಿಗಳನ್ನು ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

21ನೇ ಶತಮಾನದಲ್ಲಿಯೂ ಸಹ ಇಂತಹ ಪರಿಸ್ಥಿತಿ ವಿಶ್ವವಿದ್ಯಾಲಯಕ್ಕೆ ಬಂದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ತೆಂಗಿನ ಚಿಪ್ಪಿನಲ್ಲಿ ಆಹಾರ ಬಡಿಸುವ ಮೂಲಕ ವಿಶ್ವವಿದ್ಯಾಲಯದ ಮರ್ಯಾದೆಯನ್ನು ಕಳೆಯಲಾಗಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಅವಮಾನ ಮಾಡಲಾಗಿದೆ. ಇದರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗುಣಮಟ್ಟ ಆಹಾರ ಕೇಳಿದ ವಿದ್ಯಾರ್ಥಿಗಳ ಮೇಲೆ ನಿಲಯ ಪಾಲಕರು ಮತ್ತು ಕೆಲ ಸಿಬ್ಬಂದಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಆಂತರಿಕ ಅಂಕಗಳ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಪ್ರಸಂಗಗಳು ನಡೆಯುತ್ತಿವೆ. ಇಂತಹ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳ ಮೇಲಿನ ಇಂತಹ ದೌರ್ಜನ್ಯವನ್ನು ಎಸ್ಎಫ್ಐ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಅವ್ಯಸ್ಥೆಯನ್ನು ಸರಿಪಡಿಸಲು ಮುಂದಾಗದಿದ್ದರೆ ವಿವಿ ಮುತ್ತಿಗೆ ಕಾರ್ಯಕ್ರಮವನ್ನು ಎಸ್ಎಫ್ಐ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಸ್ಎಫ್ಐ ಸದಸ್ಯ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುವವರೆಗೂ ಹಾಸ್ಟೆಲ್ನಲ್ಲಿ ವಸತಿ ಮತ್ತು ಊಟದ ಸೌಲಭ್ಯ ಕಲ್ಪಿಸಬೇಕು. ಯಾವುದೇ ವಿದ್ಯಾರ್ಥಿಗಳಿಗೂ ತೊಂದರೆಯಾಗದ ರೀತಿಯಲ್ಲಿ ನಿಲಯ ಪಾಲಕರು ಗಮನಹರಿಸಬೇಕು ಎಂದರು.

ಹಾಸ್ಟೆಲ್ ವಿದ್ಯಾರ್ಥಿ ವೆಂಕಪ್ಪ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಹಳ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಮಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಇರುವುದಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹಾಸ್ಟೆಲ್ನಲ್ಲಿ ದಾಖಲಾಗದ ಹೊರಗಿನ ವ್ಯಕ್ತಿಗಳ ಹಾವಳಿಯು ಹೆಚ್ಚಳವಾಗಿದೆ. ಇದರಿಂದ ಹಲವಾರು ಸಂದರ್ಭದಲ್ಲಿ ಗಲಾಟೆಗಳು ಸಹ ನಡೆಯುತ್ತಿವೆ. ಆದ್ದರಿಂದ ವಿಶ್ವವಿದ್ಯಾಲಯವು ನಮಗೆ ರಕ್ಷಣೆ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ನಗರಾಧ್ಯಕ್ಷ ಶಶಿ ವರ್ಧನ್, ಎಂ.ಆರ್. ತ್ಯಾಗರಾಜು, ಶಿವಲಿಂಗ, ಶಿವರಾಜು, ನರಸಿಂಹಮೂರ್ತಿ ಇತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular