ರಾಹುಲ್ ಗಾಂಧಿ ಅವರು ರೈತರು ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳ ಪ್ರತಿನಿಧಿಗಳ ಜತೆ 1 ಗಂಟೆಗೂ ಅಧಿಕ ಸಮಯ ಚರ್ಚೆ ಮಾಡಿ, ಅವರ ಸಮಸ್ಯೆ ಹಾಗೂ ಬೇಡಿಕೆ ಆಲಿಸಿದ್ದು , ಕನಿಷ್ಟ ಬೆಂಬಲ ಬೆಲೆ, ವಿಮೆ ಹೆಸರಲ್ಲಿ ಆಗುತ್ತಿರುವ ಅನ್ಯಾಯ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ರಾಷ್ಟ್ರೀಯ ನೀತಿ, ರಾಜ್ಯದ ಮಾದರಿಯಲ್ಲಿ ರಾಷ್ಟ್ರ ಮಟ್ಟದ ಗಣತಿ ಮತ್ತಿತರ ವಿಚಾರ ಮುಂದಿಟ್ಟಿದ್ದಾರೆ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ನ್ಯಾ. ನಾಗಮೋಹನ್ ದಾಸ್ ಸಮಿತಿ ರಚಿಸಿ ವರದಿ ಸಲ್ಲಿಸಲಾಗಿತ್ತು. ಈ ಸಮಿತಿ ವರದಿಯನ್ನು ಸರ್ಕಾರ ಕಳೆದ ಮೂರು ವರ್ಷಗಳಿಂದ ಯಾವುದೇ ಕ್ರಮ ಕೈಗೊಳ್ಳದೇ ಪಕ್ಕಕ್ಕಿಟ್ಟಿತ್ತು. ಈಗ ನಾವು ಧ್ವನಿ ಎತ್ತಿದ ನಂತರ ಸಚಿವ ಸಂಪುಟದಲ್ಲಿ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದಾರೆ. ಇದು ಬಹಳ ಸಂತೋಷದ ವಿಚಾರ ಎಂದರು
ಬಿಜೆಪಿಯದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಡಬಲ್ ಇಂಜಿನ್ ಎಂದರೆ ಎರಡೂ ಇಂಜಿನ್ ಕೆಲಸ ಮಾಡಬೇಕು. ಒಂದು ಇಂಜಿನ್ ನಿಂತರೂ ಪ್ರಯೋಜನವಿಲ್ಲ. ಈಗ ಸುಗ್ರೀವಾಜ್ಞೆ ತರುತ್ತೇವೆ ಎನ್ನುತ್ತಿರುವ ಸರ್ಕಾರ ಇದೇ ಸುಗ್ರೀವಾಜ್ಞೆ ತೆಗೆದುಕೊಂಡು ದೆಹಲಿಗೆ ಹೋಗಿ ಅಲ್ಲಿಯೂ ಅನುಮೋದನೆ ಪಡೆದು ಅದಕ್ಕೆ ಬೇಕಾದ ಸಾಂವಿಧಾನಿಕ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಕೇವಲ ಬಾಯಿ ಮಾತಿನಲ್ಲಿ ಅಥವಾ ಕಾಗದದ ಮೇಲೆ ಮೀಸಲಾತಿ ನೀಡಿ, ಕಿವಿಗೆ ಇಂಪಾಗುವಂತೆ ಹೇಳಿದರೆ ಸಾಲದು. ಇದನ್ನು ಕಾರ್ಯರೂಪಕ್ಕೆ ತರಬೇಕು, ಇಲ್ಲದಿದ್ದರೆ ವ್ಯರ್ಥ. ಕಳೆದ ಮೂರು ವರ್ಷಗಳಿಂದ ಸರ್ಕಾರ ಮಲಗಿತ್ತು. ಈಗ ಜನ ಸರ್ಕಾರವನ್ನು ಕಿತ್ತೊಗೆಯಲು ಸಂಕಲ್ಪ ಮಾಡಿರುವಾಗ, ಆಯಾ ಸಮಾಜದ ಶಾಸಕರು, ಸ್ವಾಮೀಜಿಗಳು ಹಾಗೂ ಕಾಂಗ್ರೆಸ್ ಪಕ್ಷ ಧ್ವನಿ ಎತ್ತಿದ ಬಳಿಕ ಈ ಮೀಸಲಾತಿ ನೀಡುವ ವಿಚಾರಕ್ಕೆ ಒಪ್ಪಿಗೆ ನೀಡಲು ಮುಂದಾಗಿದೆ. ಆ ಮೂಲಕ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ತಂತ್ರ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ಮೊಸಳೆ ಕಣ್ಣೀರು ಹಾಕಿ ಜನರನ್ನು ತಪ್ಪು ದಾರಿಗೆ ಎಳೆಯಬೇಡಿ. ಮುಖ್ಯಮಂತ್ರಿಗಳೇ ನಿಮಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಅವರಿಗೆ ನ್ಯಾಯ ಒದಗಿಸಿಕೊಡಲು ಯಾವುದೇ ಚಿಂತನೆ ಮಾಡಿಲ್ಲ. ನಾವು ಬೆಳಗಾವಿ ಅಧಿವೇಶನದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಅನುದಾನ ನೀಡುವ ಕಾನೂನು ತಂದಿದ್ದೇವೆ. ನೀವು ಅದನ್ನು ಮುಂದುವರಿಸಿಕೊಂಡು ಹೋಗಲು ಆಗಲಿಲ್ಲ. ಅವರಿಗಾಗಿ ಮೀಸಲಿಡಬೇಕಿದ್ದ ಹಣವನ್ನು ಬೇರೆ ಕಾರ್ಯಗಳಿಗೆ ವರ್ಗಾವಣೆ ಮಾಡಿ ಪರಿಶಿಷ್ಟರು, ಹಿಂದುಳಿದ ಸಮಾಜದವರಿಗೆ ಅನ್ಯಾಯ ಮಾಡಿದ್ದೀರಿ. ಈಗ ನೀವು ಮಾಡಿರುವ ಸುಗ್ರೀವಾಜ್ಞೆಯನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ತಿದ್ದುಪಡಿ ತಂದು ಮೀಸಲಾತಿ ನೀಡಬೇಕು. ಅಲ್ಲಿಯವರೆಗೂ ನಾವು ಹೋರಾಟ ಮುಂದುವರಿಸಲಿದ್ದು, ನಮ್ಮ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಮೀಸಲಾತಿ ನೀಡಿದ್ದೇವೆ ಎಂದು ಪ್ರಚಾರ ಪಡೆಯುವುದಲ್ಲ, ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಅಧಿಕಾರ ನಿಮ್ಮ ಕೈಯಲ್ಲೇ ಇದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದರು.