ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಅಪ್ಪರ್ ಸಿಯಾಂಗ್ ಜಿಲ್ಲೆಯ ಟುಟಿಂಗ್ ಬಳಿಯ ಮಿಗ್ಗಿಂಗ್ ನಲ್ಲಿ ಬೆಳಗ್ಗೆ 10:43ಕ್ಕೆ ಈ ಘಟನೆ ಸಂಭವಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಶೋಧ ಕಾರ್ಯಗಳು ಪ್ರಗತಿಯಲ್ಲಿವೆ. ಹೆಲಿಕಾಪ್ಟರ್‌ನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ವೈರಲ್ ವೀಡಿಯೊಗಳಲ್ಲಿ, ಪರ್ವತದಿಂದ ಹೊಗೆ ಬರುತ್ತಿರುವುದನ್ನು ಕಾಣಬಹುದು. ಸುಧಾರಿತ ಲಘು ಹೆಲಿಕಾಪ್ಟರ್ (ALH) ಬೆಳಗ್ಗೆ 10:40 ರ ಸುಮಾರಿಗೆ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್ ಪ್ರದೇಶದ ಬಳಿ ಪತನಗೊಂಡಿದೆ ಎಂದು ರಕ್ಷಣಾ ಪಿಆರ್.ಒ ತಿಳಿಸಿದ್ದಾರೆ. ಜುಮ್ಮರ್ ಬಸಾರ್, ಪೊಲೀಸ್ ವರಿಷ್ಠಾಧಿಕಾರಿ ಅಪ್ಪರ್ ಸಿಯಾಂಗ್ ಮಾತನಾಡಿ ಅಪಘಾತದ ಸ್ಥಳವನ್ನು ರಸ್ತೆಯ ಮೂಲಕ ಸಂಪರ್ಕಿಸಲಾಗಿಲ್ಲ. ರಕ್ಷಣಾ ತಂಡ ಅಲ್ಲಿಗೆ ಧಾವಿಸಿದ್ದು, ಅಗತ್ಯ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ. "ತವಾಂಗ್ ಬಳಿಯ ಫಾರ್ವರ್ಡ್ ಪ್ರದೇಶಗಳಲ್ಲಿ ಹಾರುತ್ತಿದ್ದ ಚೀತಾ ಹೆಲಿಕಾಪ್ಟರ್ ಬೆಳಗ್ಗೆ 10:00 ಸುಮಾರಿಗೆ ದಿನನಿತ್ಯದ ಕಾರ್ಯಾಚರಣೆಯ ಸಮಯದಲ್ಲಿ ಅಪಘಾತಕ್ಕೀಡಾಯಿತು. ಇಬ್ಬರೂ ಪೈಲಟ್‌ಗಳನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು" ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.