ಸದಾನಂದ ಗಂಗನಬೀಡು
ದಲಿತ ರಾಜಕಾರಣದ ಸಾಧ್ಯತೆಯನ್ನು ಶೋಧಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಪ್ರಥಮ ಬಾರಿಗೆ ಹುಟ್ಟು ಹಾಕಿದ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ. ಈ ಪಕ್ಷ ದಲಿತ ಅಸ್ಮಿತೆ ರಾಜಕಾರಣದಲ್ಲಿ ಯಶಸ್ವಿ ಆಗುವುದಿರಲಿ; ಸ್ವತಃ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಪಕ್ಷದಿಂದ ಸ್ಪರ್ಧಿಸಿ ಒಮ್ಮೆಯೂ ಗೆಲುವು ಸಾಧಿಸಲಾಗಲಿಲ್ಲ. ಅವರ ಕಾಲಾನಂತರ ಮಹಾರಾಷ್ಟ್ರದಲ್ಲಿ ಆರ್‌ಪಿಐ ಒಂದಷ್ಟು ಸ್ಥಾನಗಳನ್ನು ಜಯಿಸುವಲ್ಲಿ ಯಶಸ್ವಿಯಾದರೂ, ದಲಿತ ಅಸ್ಮಿತೆ ರಾಜಕಾರಣದ ದೊಡ್ಡ ಹೆಜ್ಜೆ ಗುರುತು ಮೂಡಿಸಲು ಸಾಧ್ಯವಾಗಲೇ ಇಲ್ಲ.
ಹಾಗೆ ನೋಡಿದರೆ, ಕಾನ್ಷಿರಾಂ ನಾಯಕತ್ವದ ಬಹುಜನ ಸಮಾಜ ಪಕ್ಷವೇ ದಲಿತ ಅಸ್ಮಿತೆ ರಾಜಕಾರಣದ ಬಗ್ಗೆ ದೊಡ್ಡ ಜಾಗೃತಿ ಮೂಡಿಸಿದ್ದು. ಪಂಜಾಬ್ ಮೂಲದ ಕಾನ್ಷಿರಾಂರ ಬಿಎಸ್‌ಪಿ ಉತ್ತರ ಪ್ರದೇಶದಲ್ಲಿ ದೊಡ್ಡ ಯಶಸ್ಸು ಸಾಧಿಸಲು ಅಲ್ಲಿನ ದಲಿತರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯೂ ದೊಡ್ಡ ಕಾಣಿಕೆ ನೀಡಿತು. ಚಮ್ಮಾರ ಸಮುದಾಯ ಅತ್ಯಂತ ಸಾಂದ್ರವಾಗಿ ವಾಸಿಸುತ್ತಿರುವ ರಾಜ್ಯ ಉತ್ತರ ಪ್ರದೇಶ. ಮುಸ್ಲಿಮರನ್ನು ಹೊರತುಪಡಿಸಿದರೆ ಚರ್ಮ ಹದ ಮಾಡುವ ಉದ್ದಿಮೆ ಹೊಂದಿರುವ ಸಮುದಾಯಗಳ ಪೈಕಿ ಚಮ್ಮಾರರದ್ದೇ ಉತ್ತರ ಪ್ರದೇಶದಲ್ಲಿ ಮೇಲುಗೈ. ಹೀಗಾಗಿ ಚಮ್ಮಾರರು ಆ ರಾಜ್ಯದಲ್ಲಿ ಆರ್ಥಿಕವಾಗಿ ಒಂದಿಷ್ಟು ಪ್ರಬಲವಾಗಿದ್ದಾರೆ. ಈ ಆರ್ಥಿಕ ಸಬಲತೆಯಿಂದಾಗಿಯೇ ಬಿಎಸ್‌ಪಿ ಪಕ್ಷ ದಲಿತರ ಅಸ್ಮಿತೆ ರಾಜಕಾರಣವನ್ನು ಬೇರೆಲ್ಲ ರಾಜ್ಯಗಳಿಗಿಂತ ಉತ್ತರ ಪ್ರದೇಶದಲ್ಲೇ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಿದ್ದು.
ಹೀಗಿದ್ದೂ ಬಿಎಸ್‌ಪಿ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದಾಗ ನಮ್ಮ ರಾಜ್ಯದ ಜೆಡಿಎಸ್‌ನಂತೆಯೇ ಕಡಿಮೆ ಸಂಖ್ಯಾಬಲ ಹೊಂದಿದ್ದೂ ತನಗಿಂತ ಹೆಚ್ಚು ಶಾಸಕರನ್ನು ಹೊಂದಿದ್ದ ಬಿಜೆಪಿಯ ಬೆಂಬಲ ಪಡೆದಿತ್ತು. ತನಗೆ ದೊರೆತ ಮೊದಲ ಅವಕಾಶದಲ್ಲೇ ಮಾಯಾವತಿ ತಾನೊಬ್ಬ ಉತ್ತಮ ಆಡಳಿತಗಾರ್ತಿ ಎಂಬ ಛಾಪನ್ನು ಮತದಾರರ ಮೇಲೆ ಒತ್ತುವಲ್ಲಿ ಯಶಸ್ವಿಯಾಗಿದ್ದರು. ಹೀಗಿದ್ದೂ ಕೇವಲ ದಲಿತ ಅಸ್ಮಿತೆ ರಾಜಕಾರಣದಿಂದಲೇ ಬಿಎಸ್‌ಪಿ ಪೂರ್ಣಪ್ರಮಾಣದ ರಾಜ್ಯಾಧಿಕಾರ ಹಿಡಿಯಲು ಸಾಧ್ಯವಿರಲಿಲ್ಲ. ಹೀಗಾಗಿಯೇ ಉತ್ತರ ಪ್ರದೇಶದಲ್ಲಿ ಅತ್ಯಂತ ಗರಿಷ್ಠ ಜನಸಂಖ್ಯಾ ಪ್ರಮಾಣವನ್ನು ಹೊಂದಿರುವ ಬ್ರಾಹ್ಮಣರೊಂದಿಗೆ ‘ಭಾಯ್‌ಚಾರ್’ ಎಂಬ Social engineering ನಡೆಸಿದರು. ಇದರ ಫಲಿತಾಂಶ ಕೂಡಾ ಅಭೂತಪೂರ್ವವಾಗಿತ್ತು. 2007ರ ಚುನಾವಣೆಯಲ್ಲಿ ಸ್ವಂತ ಬಹುಮತದ ಮೂಲಕ ಬಿಎಸ್‌ಪಿ ಅಧಿಕಾರಕ್ಕೆ ಬಂದಿತು. ಇದಾದ ನಂತರ ಮಾಯಾವತಿ ‘ಭಾಯ್‌ಚಾರ್’ ಸಭೆಗಳನ್ನು ನಿರ್ಲಕ್ಷಿಸಿದ್ದರಿಂದ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಇಂದು ಅವಸಾನದ ಅಂಚಿಗೆ ಬಂದು ನಿಂತಿದೆ.
ಇಷ್ಟೆಲ್ಲ ಹೇಳಲು ಕಾರಣ, ಇತ್ತೀಚೆಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಹಿರಿಯ ಲೇಖಕ, ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಮತ್ತೆ ‘ದಲಿತ ಅಸ್ಮಿತೆ ರಾಜಕಾರಣ’ ಸಾಧ್ಯತೆ ಕುರಿತು ಪ್ರಸ್ತಾಪಿಸಿರುವುದು. ದಲಿತ ಅಸ್ಮಿತೆ ರಾಜಕಾರಣ ಮೇಲ್ಜಾತಿಗಳ ಸಹಾನುಭೂತಿ ಇಲ್ಲದೆ ಅಸಾಧ್ಯ ಎಂಬುದನ್ನು ಉತ್ತರ ಪ್ರದೇಶದಲ್ಲಿನ ಬಿಎಸ್‌ಪಿ ಅವನತಿಯ ಪಾಠ ಹೇಳುತ್ತಿದೆ. 1980ರ ದಶಕದಲ್ಲಿ ಡಿಎಸ್‌ಎಸ್ ಕೂಡಾ ಇಂತಹುದೇ ದಲಿತ ಅಸ್ಮಿತೆ ರಾಜಕಾರಣ ನಡೆಸಲು ಫ್ಯೂಡಲ್‌ಗಳ ಪಕ್ಷವಾದ ಜನತಾ ಪಕ್ಷದೊಂದಿಗೆ ಕೈಜೋಡಿಸಿತು. ಇದರಿಂದ ಜನತಾ ಪಕ್ಷ ಬಲವಾಯಿತೇ ಹೊರತು ಡಿಎಸ್‌ಎಸ್ ಅಲ್ಲ. ಬದಲಿಗೆ, ಜನತಾ ಪಕ್ಷದ ತೆಕ್ಕೆಗೆ ಸೇರಿ ಛಿದ್ರ ಛಿದ್ರವಾಯಿತು.
ಇದಾದ ನಂತರ 2018ರ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಜೆಡಿಎಸ್ ಪಕ್ಷದೊಂದಿಗೆ ಬಿಎಸ್‌ಪಿ ಕೈಜೋಡಿಸಿತು. ಈ ಮೈತ್ರಿಯಿಂದ ಬಿಎಸ್‌ಪಿ ಕೇವಲ ಒಬ್ಬ ಶಾಸಕನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾದರೆ, ಜೆಡಿಎಸ್ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯಿತು. ಅದಕ್ಕೆ ಬಲವಾದ ಕಾರಣವೂ ಇತ್ತು. ದಲಿತ ಅಸ್ಮಿತೆ ರಾಜಕಾರಣ ಮಾಡುವ ಉಮೇದಿನಲ್ಲಿದ್ದ ಬಿಎಸ್‌ಪಿ, ತನ್ನ ಮತ ಬ್ಯಾಂಕ್ ಅನ್ನು ಸಾರಾಸಗಟಾಗಿ ಜೆಡಿಎಸ್‌ಗೆ ವರ್ಗಾಯಿಸಿದರೆ, ಜೆಡಿಎಸ್ ಮತಗಳು ಬಿಎಸ್‌ಪಿಗೆ ವರ್ಗಾವಣೆಗೊಳ್ಳಲೇ ಇಲ್ಲ. ಹೀಗಾಗಿ ಮೊದಲಿನಿಂದಲೂ ಬಿಎಸ್‌ಪಿ ಬಲಿಷ್ಠವಾಗಿದ್ದ ಕೊಳ್ಳೇಗಾಲದಲ್ಲಿ ಮಾತ್ರ ಆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದರು.
ಈ ಎರಡು ಉದಾಹರಣೆಗಳು ದಲಿತರಿಗೆ ನೀಡುವ ರಾಜಕೀಯ ಪಾಠ, ಈ ದೇಶದಲ್ಲಿ ಮೇಲ್ಜಾತಿಗಳ ಸಹಾನುಭೂತಿ ಇಲ್ಲದೆ ದಲಿತ ಅಸ್ಮಿತೆ ರಾಜಕಾರಣ ಸಲೀಸಲ್ಲ ಎಂದು. ಹಾಗಾದರೆ, ದಲಿತರು ದಲಿತ ಅಸ್ಮಿತೆ ರಾಜಕಾರಣ ಮಾಡುವುದು ಅಸಾಧ್ಯವೆ? ಹಾಗಾದರೆ ದಲಿತರ ಮುಂದಿರುವ ರಾಜಕೀಯ ಆಯ್ಕೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದಕ್ಕಿರುವ ಉತ್ತರ: ಚೌಕಾಸಿ ರಾಜಕಾರಣ ಅದರಲ್ಲೂ ಕಾಂಗ್ರೆಸ್ ಪಕ್ಷದೊಂದಿಗಿನ ಚೌಕಾಸಿ ರಾಜಕಾರಣ. ಈ ಸಲಹೆಗೆ ಬಲವಾದ ಕಾರಣವೂ ಇದೆ.
ಸ್ವಾತಂತ್ರ್ಯಾನಂತರ ದಲಿತರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷದೊಂದಿಗೆ. ಅದಕ್ಕಿದ್ದ ಪ್ರಮುಖ ಕಾರಣ ಕಾಂಗ್ರೆಸ್ ತನ್ನ ಇತಿಮಿತಿಯಲ್ಲೇ ದಲಿತ ಪರ ಯೋಜನೆಗಳನ್ನು ಜಾರಿಗೆ ತಂದಿದ್ದು. ಅದರ ಪ್ರಸಿದ್ಧ ಘೋಷ ವಾಕ್ಯ: “ಪ್ರತಿ ವ್ಯಕ್ತಿಗೂ ರೊಟ್ಟಿ, ಬಟ್ಟೆ ಮತ್ತು ವಸತಿ”. ಈ ಘೋಷ ವಾಕ್ಯದಂತೆಯೆ ಕಾಂಗ್ರೆಸ್ ತನ್ನ ಎಪ್ಪತ್ತು ವರ್ಷದ ಆಡಳಿತಾವಧಿಯಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿತು. ಇದು ಸಹಜವಾಗಿಯೇ ಮೇಲ್ಜಾತಿಗಳ ಕಣ್ಣನ್ನು ಕೆಂಪಾಗಿಸಿತು. ಆಗಲೇ ಭೂಮಾಲೀಕರ ಒತ್ತಾಸೆಯೊಂದಿಗೆ ಪ್ರವರ್ಧಮಾನಕ್ಕೆ ಬಂದಿದ್ದು ಜನತಾ ಪಕ್ಷ. ಈ ಪಕ್ಷದ ಬಹುತೇಕ ನಾಯಕರು ಜಮೀನ್ದಾರಿಗಳೇ ಆಗಿರುವುದು ಕೇವಲ ಕಾಕತಾಳೀಯವಲ್ಲ. ಅದು ಅತ್ಯಂತ ವ್ಯವಸ್ಥಿತವಾಗಿಯೇ ನಡೆದಿರುವ ವಿದ್ಯಮಾನ. ಇದಾದ ನಂತರ ಕಾಂಗ್ರೆಸ್ ವಿರುದ್ಧ ಬಂಡೆದ್ದು ಪ್ರಾದೇಶಿಕ ಪಕ್ಷ ಸ್ಥಾಪಿಸಿದ ಹಲವಾರು ನಾಯಕರೂ ಕೂಡಾ ಭೂಮಾಲೀಕ ಸಮುದಾಯದವರೇ ಎಂಬುದು ಗಮನಾರ್ಹ ಸಂಗತಿ.
ಪ್ರಾದೇಶಿಕ ಪಕ್ಷಗಳ ಬಲವರ್ಧನೆಯೊಂದಿಗೆ ದಲಿತ ಅಸ್ಮಿತೆ ರಾಜಕಾರಣವೂ ಮುನ್ನೆಲೆಗೆ ಬಂದ ಪರಿಣಾಮ ಕಾಂಗ್ರೆಸ್ ದುರ್ಬಲಗೊಳ್ಳತೊಡಗಿತು. ಎಷ್ಟರ ಮಟ್ಟಿಗೆ ಎಂದರೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಲೂ ಸಾಧ್ಯವಾಗದಷ್ಟು. ಇದೆಲ್ಲದರ ಪರಿಣಾಮ ಮಾತ್ರ ಭೀಕರವಾಯಿತು. ಕಳೆದ ಎಂಟು ವರ್ಷಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ದಳದ ವರದಿಯಲ್ಲಿ ಹೇಳಲಾಗಿದೆ. ಈ ಪೈಕಿ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುತ್ತಿರುವುದು ಹಿಂದಿ ಭಾಷಿಕ ರಾಜ್ಯಗಳಲ್ಲಿ. ಈ ಪೈಕಿ ಒಂದು ಕಾಲದಲ್ಲಿ ಬಿಎಸ್‌ಪಿಯ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲೇ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ತೀವ್ರ ಸ್ವರೂಪದಲ್ಲಿದೆ. ಮೇಲಾಗಿ ಬಹುತೇಕ ಹಿಂದಿ ಭಾಷಿಕ ರಾಜ್ಯಗಳಲ್ಲಿ ಒಂದೋ ಕಾಂಗ್ರೆಸ್ ದುರ್ಬಲವಾಗಿದೆ ಅಥವಾ ಅದರ ಅಸ್ತಿತ್ವವೇ ಇಲ್ಲದಂತಾಗಿದೆ. ಕಾಂಗ್ರೆಸ್ ಪಕ್ಷ ಯಾವೆಲ್ಲ ರಾಜ್ಯಗಳಲ್ಲಿ ದೀರ್ಘಕಾಲ ಆಡಳಿತ ನಡೆಸಿಲ್ಲವೊ ಅಲ್ಲೆಲ್ಲ ದಲಿತರು ಇನ್ನೂ ಶೋಚನೀಯ ಬದುಕನ್ನೇ ದೂಡುತ್ತಿದ್ದಾರೆ.
ಅದೇ ದಕ್ಷಿಣ ಭಾರತದ ರಾಜಕಾರಣದ ಮೇಲೆ ಒಮ್ಮೆ ಕಣ್ಣಾಡಿಸಿ. ಈ ಭಾಗದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ದೀರ್ಘಕಾಲ ಆಡಳಿತ ನಡೆಸಿರುವುದರಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹಿಂದಿ ಭಾಷಿಕ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆ ಪ್ರಮಾಣದಲ್ಲಿವೆ. ಅದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಸರ್ಕಾರಗಳು ಸಾಮಾಜಿಕ ನ್ಯಾಯ ತತ್ವದಡಿಯಲ್ಲಿ ದಲಿತರಿಗೆ ಶಿಕ್ಷಣ, ಉದ್ಯೋಗಗಳಲ್ಲಿ ದೊಡ್ಡ ಅವಕಾಶ ಒದಗಿಸಿದ್ದು. ಇದರ ನೆರವಿನಿಂದ ದಲಿತರಲ್ಲಿ ಜಾಗೃತಿ ಉಂಟಾಗಿ ಸಂಘಟಿತರಾಗಿದ್ದು. ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿದ್ದು ಸಾಮಾನ್ಯ ದಲಿತರಲ್ಲ; ಬದಲಿಗೆ ಶಿಕ್ಷಿತ ಮತ್ತು ಉದ್ಯೋಗಸ್ಥ ದಲಿತರು ಎಂಬುದಿಲ್ಲಿ ಗಮನಾರ್ಹ ಸಂಗತಿ. ಈ ಶಿಕ್ಷಿತ ಮತ್ತು ಉದ್ಯೋಗಸ್ಥ ದಲಿತರು ಸೃಷ್ಟಿಯಾಗಿದ್ದೂ ಕೂಡಾ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಎಂಬುದು ಮತ್ತೂ ಗಮನಾರ್ಹ ಸಂಗತಿ.
ದಕ್ಷಿಣ ಭಾರತದ ರಾಜ್ಯಗಳು ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾಗಾಲೋಟದ ಪ್ರಗತಿ ಸಾಧಿಸಿದ್ದರೆ ಹಿಂದಿ ಭಾಷಿಕ ರಾಜ್ಯಗಳು ಇಂದಿಗೂ ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನದಲ್ಲಿ ಮಾರು ದೂರ ಹಿಂದೆ ಬಿದ್ದಿವೆ. ಹಾಗೆಯೇ ಈ ರಾಜ್ಯಗಳಲ್ಲಿನ ಸಾಮಾಜಿಕ ಅಸಮಾತೆಯೂ ಕಳವಳಕರಿ ಪ್ರಮಾಣದಲ್ಲೇ ಉಳಿದು, ಮತ್ತಷ್ಟು ಪ್ರಬಲಗೊಳ್ಳುತ್ತಿವೆ. ಅದಕ್ಕಿರುವ ಪ್ರಮುಖ ಕಾರಣ ದಕ್ಷಿಣ ಭಾರತ ರಾಜ್ಯಗಳಲ್ಲಿ ಕಾಂಗ್ರೆಸ್ ಈಗಲೂ ತನ್ನ ನೆಲೆಯನ್ನು ಉಳಿಸಿಕೊಂಡು, ದೀರ್ಘಕಾಲ ಆಡಳಿತ ನಡೆಸಿರುವುದು. ಅದೇ ಹಿಂದಿ ಭಾಷಿಕ ರಾಜ್ಯಗಳಲ್ಲಿ ನೆಲೆ ಕಳೆದುಕೊಂಡು ಮೂರು ದಶಕಗಳೇ ಗತಿಸಿ ಹೋಗಿರುವುದು.
ದಲಿತ ಅಸ್ಮಿತೆ ರಾಜಕಾರಣದ ಪರ ಧ್ವನಿ ಎತ್ತುವುದು ಖಂಡಿತ ಅಪರಾಧವಲ್ಲ. ಆದರೆ, ಮೇಲ್ಜಾತಿಗಳ ಸಹಾನುಭೂತಿ ಗಳಿಸದೆ, ಅಪಕ್ವ ಸಮಯದಲ್ಲಿ ದಲಿತ ಅಸ್ಮಿತೆ ರಾಜಕಾರಣ ಮಾಡಲು ಹೊರಡುವುದು ಆತ್ಮಹತ್ಯಾತ್ಮಕವಾಗುತ್ತದೆ. ಅದರ ಬದಲು ಕಾಂಗ್ರೆಸ್ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿ, ಪಕ್ಷಗಳು ಅದರೊಂದಿಗೆ ಕೊಡು-ಕೊಳ್ಳುವ ರಾಜಕಾರಣ ಮಾಡಲು ಮುಂದಡಿ ಇಡುವುದು ಮಾತ್ರ ವಿವೇಕಯುತವಾಗಲಿದೆ. ದಲಿತ ಅಸ್ಮಿತೆ ರಾಜಕಾರಣದ ನೆಪದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿದರೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ದಲಿತರು ಅನುಭವಿಸುತ್ತಿರುವ ಶೋಚನೀಯ ಪರಿಸ್ಥಿತಿಯೇ ಇಲ್ಲಿನ ದಲಿತರಿಗೂ ಕಟ್ಟಿಟ್ಟ ಬುತ್ತಿ. ಬಿಎಸ್‌ಪಿ ಮಾಡಿರುವ ಇಂತಹ ಆತ್ಮಹತ್ಯಾತ್ಮಕ ರಾಜಕಾರಣವನ್ನು ಕೋಟಿಗಾನಹಳ್ಳಿ ರಾಮಯ್ಯ ಥರದ ದಲಿತ ಚಿಂತಕರೂ ಮಾಡದಿರಲಿ. ಅದರಿಂದ ಮನುವಾದಿಗಳಿಗೇ ಹೆಚ್ಚು ಲಾಭವಾಗಿರುವುದು ಎಂಬ ಸಂಗತಿಯನ್ನು ಮರೆಯದಿರಲಿ.
ಕಾಂಗ್ರೆಸ್ ಪಕ್ಷ ಈವರೆಗೆ ಮಾಡಿರುವ ಲೋಪಗಳನ್ನು ಪ್ರಜಾಸತ್ತಾತ್ಮಕವಾಗಿ ಚರ್ಚಿಸುವ ಹಕ್ಕನ್ನು ಕಾಯ್ದಿರಿಸಿಕೊಂಡೇ ಕಾಂಗ್ರೆಸ್ ವೇದಿಕೆಯಡಿ ಎಲ್ಲ ದಲಿತ ಸಮುದಾಯಗಳು ಮುಖ್ಯವಾಗಿ ಹೊಲೆಯ ಮತ್ತು ಮಾದಿಗ ಸಮುದಾಯಗಳು ಬರಬೇಕಾದ ತುರ್ತು ಈ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಈ ತುರ್ತನ್ನು ಇಂದು ಮನಗಾಣದಿದ್ದರೆ ಮುಂದೆಂದೂ ಮನಗಾಣುವ ಅವಕಾಶವೇ ದೊರೆಯುವುದಿಲ್ಲ. ಈ ಎಚ್ಚರ ನನ್ನ ಎಲ್ಲ ದಲಿತ ಬಂಧುಗಳಲ್ಲಿ ಮೂಡುವಂತಾಗಲಿ…
ಲೇಖಕರು: ಹಿರಿಯ ಪತ್ರಕರ್ತರು