ಕಾಂಗ್ರೆಸ್ ನಾಯಕರ ಅಕ್ರಮದ ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ಕಳುಹಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಸದ್ಯಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು. ರಾಹುಲ್ ಗಾಂಧಿ ಅವರಲ್ಲ ಎನ್ನುವುದು ನಿಮ್ಮ ನೆನಪಿನಲ್ಲಿರಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿಯವರೇ ತನಿಖೆ ನಡೆಸಿ ಶಿಕ್ಷೆ ಕೊಡಬೇಕಾದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ನೀವು ರಾಜಿನಾಮೆ ಕೊಟ್ಟು ಮನೆಗೆ ಹೋಗಿ, ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ನಾವು ಮಾಡುತ್ತೇವೆ ಎಂದು ಲೇವಡಿ ಮಾಡಿದ್ದಾರೆ.
ಅಕ್ರಮಗಳು ಯಾರ ಕಾಲದಲ್ಲಿ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಾ ಬಂದವನು ನಾನು. ಇದಕ್ಕಾಗಿಯೇ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೇ ನ್ಯಾಯಾಂಗ ತನಿಖೆ ನಡೆಸಬೇಕೆಂದು ಹಿಂದೆ ಮಾಡಿರುವ ಒತ್ತಾಯವನ್ನು ಪುನರುಚ್ಚರಿಸುತ್ತೇನೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ನೀವು ಕಾಣಬಯಸಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ನಮ್ಮ ನಾಯಕರು ಜನಮತದ ಬೆಂಬಲದಿಂದಲೇ ಪ್ರಧಾನಿಯಾಗುವವರು. ನಿಮ್ಮ ಹಾಗೆ ಆಪರೇಷನ್ ಕಮಲದ ಮೂಲಕ ಆ ಸ್ಥಾನಕ್ಕೆ ಏರುವವರಲ್ಲ ಎಂದಿದ್ದಾರೆ.
ನಿಮ್ಮ ಖಾಲಿ ಡಬ್ಬದ ಸದ್ದಿಗೆ ಹೆದರುವವರು ಯಾರೂ ಇಲ್ಲ. ನಿಮ್ಮ ಧಮ್ ತಾಖತ್ ಗಳ ಮಾತುಗಳೆಲ್ಲವೂ ಸಾರ್ವಜನಿಕ ಸಭೆಗಳಿಗಷ್ಟೇ ಸೀಮಿತ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ನೀವು ಆರ್.ಎಸ್.ಎಸ್ ಮುಖಂಡರ ಮನೆಗೆ ತೆರಳಿ ಪಾದಪೂಜೆ ಮಾಡಲೇಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಸಭೆಗಳಲ್ಲಿ ವಿರೋಧ ಪಕ್ಷದ ವಿರುದ್ಧ ಅಬ್ಬರಿಸುತ್ತಿರುವ ನಿಮಗೆ, ನೀವು ಎರಡುವರೆ ಸಾವಿರ ಕೋಟಿ ದುಡ್ಡು ಕೊಟ್ಟು ಮುಖ್ಯಮಂತ್ರಿಯಾಗಿದ್ದೀರಿ ಎಂದು ಆರೋಪ ಮಾಡುತ್ತಿರುವ ನಿಮ್ಮದೇ ಪಕ್ಷದ ಒಬ್ಬ ಶಾಸಕನ ವಿರುದ್ಧ ಸೊಲ್ಲೆತ್ತುವ ಧೈರ್ಯ ಇಲ್ಲ. ಇದೆಂತಹ ನಿಮ್ಮ ಹೇಡಿತನ? ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನಾಯಕರ ಬಗ್ಗೆ ರಾಹುಲ್ ಗಾಂಧಿಯವರಿಂದಲೇ ನೀವು ತನಿಖೆ ಮಾಡಿಸುವುದಾದರೆ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ, ಐಟಿಗಳನ್ನು ಯಾಕೆ ಛೂ ಬಿಟ್ಟಿದ್ದೀರಿ? ಈ ಸಂಸ್ಥೆಗಳು ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸಿ, ಆ ಪ್ರಕರಣಗಳನ್ನೆಲ್ಲ ರಾಹುಲ್ ಗಾಂಧಿಯವರಿಗೆ ಕಳಿಸಿಬಿಡಿ ಎಂದು ತಿಳಿಸಿದ್ದಾರೆ.