“ವಿ ದ ಪೀಪಲ್ ಆಫ್ ಇಂಡಿಯಾ” ನಾಟಕದ ಖ್ಯಾತ ನಿರ್ದೇಶಕಮಿತ್ರ ಕೆ ಪಿ ಲಕ್ಷ್ಮಣ್ ಅವರ ಕರೆಯ ಮೇರೆಗೆ ಬೆಂಗಳೂರಿಗೆ ಹೋಗಿದ್ದೆ. ಲಕ್ಷ್ಮಣ್ ತಾನು ಎಷ್ಟು ಗಟ್ಟಿಗ, ಸೂಕ್ಷ್ಮಸಂವೇದಶೀಲ ಎಂಬುದನ್ನು “ವಿ ದ ಪೀಪಲ್ ಆಫ್ ಇಂಡಿಯಾ” ನಾಟಕದಲ್ಲೇ ರುಜುವಾತು ಮಾಡಿದ್ದರು. ಅವರೊಂದಿಗಿನ ಅನೇಕ ಸಂದರ್ಭದ ಮಾತುಕತೆಗಳು ಅವರ ಬಗೆಗೆ ಗೌರವವನ್ನು ಇಮ್ಮಡಿಗೊಳಿಸಿದ್ದವು.
ಕೆ.ಬಿ ಸಿದ್ದಯ್ಯ ಅವರ ಕಾವ್ಯಗಳು ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲೆಲ್ಲಾ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ನಮಗೆಲ್ಲ ತಿಳಿದ ವಿಚಾರ. ಅಂಥ ಕೆ.ಬಿ ಸಿದ್ದಯ್ಯನವರ “ದಕ್ಲಕಥಾ ದೇವಿ ಕಾವ್ಯ” “ಗಲ್ಲೆಬಾನಿ”, ‘ಕತ್ತಲೊಡನೆ ಮಾತುಕತೆ’ ಕೇಬಿಯವರ ಅನುಭವ ಕಥನದ ಕೆಲವು ಭಾಗಗಳನ್ನು ಬಳಸಿಕೊಂಡು ಲಕ್ಷ್ಮಣ್ ವಿಭಿನ್ನವಾಗಿ ಈ ನಾಟಕದಲ್ಲಿ ನಿರೂಪಿಸಿದ್ದಾರೆ. ಇಡೀ ದಕ್ಲ ಜಗತ್ತು , ಆಚರಣಾಲೋಕ, ತಳಸಮುದಾಯದ ತಳಮಳಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಕೇಬಿ ಕಾವ್ಯ ಅರ್ಥವಾಗುವುದಿಲ್ಲ ಎಂಬುದಕ್ಕೆ ನಿರ್ದೇಶಕರು ಸ್ಪಷ್ಟ ಉತ್ತರವನ್ನೇ ಈ ನಾಟಕದ ಮೂಲಕ ನೀಡಿದ್ದಾರೆ.
ನಮ್ಮ ಪರಂಪರೆಯನ್ನು ಮತ್ತೆ ಮುಟ್ಟುವ, ಜೀವಸ್ಪುರಣ ಪಡೆಯುವಂತೆ ಇಡೀ ನಾಟಕ ಹಿಡಿದಿಡುತ್ತದೆ. ಇಡೀ ತಂಡ ಪಾತ್ರಧಾರಿಗಳಾಗಿಲ್ಲ, ಸಾಂಸ್ಕೃತಿಕ ವಾರಸುದಾರರಾಗಿದ್ದಾರೆ. ನಟರ ಜುಗಲ್ ಬಂದಿ, ವಾದನಗಳ ಜುಗಲ್ ಬಂದಿ.. ಇಡೀ ನಾಟಕದ ಶಕ್ತಿ…
ಇದು ಕೇವಲ ರಿಹರ್ಸಲ್ ನಲ್ಲಿ ಆದ ಅನುಭವ.
ಕೇಬಿಯವರ ಬರಹಗಳು ಅರ್ಥಮಾಡಿಕೊಳ್ಳಲು, ರಂಗಕ್ಕೆ ಅಳವಡಿಸಲು ಸದಾ ಸವಾಲೇ. ಅಂಥ ಸವಾಲನ್ನು ಲಕ್ಷ್ಮಣ್ ಸಮರ್ಥವಾಗಿ ಇಲ್ಲಿ ನಿಭಾಯಿಸಿದ್ದಾರೆ..
ಈ ಹಿಂದೆ ಹದಿನಾರು ಹದಿನೇಳು ವರ್ಷಗಳ ಹಿಂದೆ ಪ್ರೊ.ರಾಜಪ್ಪ ದಳವಾಯಿ ಅವರು ತಮ್ಮ ವಿದ್ಯಾರ್ಥಿಗಳಿಂದ ಈ ಪ್ರಯೋಗ ಮಾಡಿ ಮುಂಬೈನಲ್ಲಿ ಪ್ರದರ್ಶನ ಮಾಡಿದ್ದರು.
ಈಗ ಲಕ್ಷ್ಮಣ್ ಮತ್ತೆ ಕೇಬಿಯನ್ನೇ ನಮ್ಮ ಮುಂದೆ ತಂದು ನಿಲ್ಲಿಸಿದ್ದಾರೆ..
ಈ ನಾಟಕ ನವೆಂಬರ್ 01 ರಂದು ಬೆಂಗಳೂರಿನ ರಂಗಶಂಕರ ದಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ಪೂರ್ಣ ರೂಪವನ್ನು ಕಣ್ತುಂಬಿಕೊಳ್ಳಲು ಕಾತುರನಾಗಿದ್ದೇನೆ..
ಇಂತಹ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಗೆಳೆಯ ಕೆ.ಪಿ.ಲಕ್ಷ್ಮಣ್ ಮತ್ತು ತಂಡಕ್ಕೆ ಅನಂತ ಶರಣು.
ಬರಹ: ರವಿಕುಮಾರ್ ನಿಹಾ, ವಿಮರ್ಶಕರು, ಕವಿಗಳು