ರಾಜ್ಯಾದ್ಯಂತ ಸುರಿದ ಭಾರೀ ಮಳೆಗೆ ರೈತರು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ರೈತರಿಗೆ ಈ ಹೊಸ ಸವಾಲು ಎದುರಾಗಿದೆ. ಜಾನುವಾರುಗಳಿಗೆ ಗಂಟು ಚರ್ಮ ರೋಗ ಹರಡುತ್ತಿದ್ದು ಇದಕ್ಕೆ 2,070 ಜಾನುವಾರುಗಳು ಬಲಿಯಾಗಿವೆ.
ರಾಜ್ಯದ 28 ಜಿಲ್ಲೆಗಳಲ್ಲಿ 46 ಸಾವಿರ ಜಾನುವಾರುಗಳಿಗೆ ಗಂಟು ಚರ್ಮರೋಗ ತಗುಲಿದ್ದು ರೋಗಕ್ಕೆ ತುತ್ತಾದ ಜಾನುವಾರುಗಳು ಮೊದಲಿನಂತೆ ಚರ್ಮದ ಮೇಲೆ ರೋಗಲಕ್ಷಣಗಳನ್ನು ತೋರಿಸುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಾನುವಾರುಗಳಿಗೆ ಶ್ವಾಸಕೋಶ ಮತ್ತು ಹೊಟ್ಟೆಗೆ ಹರಡುತ್ತಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನದ ನಂತರ ಕರ್ನಾಟಕ ಗಂಟು ಚರ್ಮ ರೋಗ ಹರಡಿರುವುದರಲ್ಲಿ ಮೂರನೇ ರಾಜ್ಯವಾಗಿದ್ದು ರೋಗವು ವೇಗವಾಗಿ ಹರಡುತ್ತಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಜೊತೆಗೆ ಜಾನುವಾರುಗಳಿಗೆ ಚಿಕಿತ್ಸೆ ಮತ್ತು ಲಸಿಕೆ ಹಾಕಲು 13 ಕೋಟಿ ರೂಗಳನ್ನು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.
ಹಸುಗಳು ಸತ್ತರೆ ರೈತರಿಗೆ 20 ಸಾವಿರ ಮತ್ತು ಎತ್ತು ಸತ್ತರೆ 30 ಸಾವಿರ ಪರಿಹಾರವನ್ನು ನೀಡಲಾಗುತ್ತಿದೆ. ಪರಿಹಾರವಾಗಿ ಈಗಾಗಲೇ 2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ರೋಗಪೀಡಿತ ಜಾನುವಾರುಗಳ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಕೋಟಿ ಮತ್ತು ಲಸಿಕೆ ಹಾಕಲು 8 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.