ಭೂತಾನ್ ನಿಂದ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಡಿಕೆ ಬೆಳೆಗಾರರು ಶಿವಮೊಗ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ತಗುಲಿರುವ ಸಂದರ್ಭದಲ್ಲಿ ಭೂತಾನ್ ಅಡಿಕೆ ಆಮದು ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಭೂತಾನ್ ನಿಂದ ಸುಂಕವಿಲ್ಲದೆ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದನ್ನು ರಾಜ್ಯ ಅಡಿಕೆ ಬೆಳೆಗಾರರ ಸಂಘಗಳು ಮತ್ತು ಅಡಿಕೆ ಬೆಳೆಗಾರರು ವಿರೋಧಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಈದಿನ.ಕಾಂ ವರದಿ ಮಾಡಿದೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಕೀಲ ಶ್ರೀಪಾಲ್ ಮೋದಿ ಸರ್ಕಾರ ಕೋಟಿ ಕೋಟಿ ಲೂಟಿ ಮಾಡಿದವರಿಗೆ ವೀಸಾ, ಪಾಸ್ ಪೋರ್ಟ್ ಮಾಡಿಸಿ ವಿದೇಶಕ್ಕೆ ಕಳಿಸಿ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಮಲೆನಾಡು ಭಾಗದ ಸಂಸದರು, ಶಾಸಕರು ಅಡಿಕೆ ಬೆಳೆಗಾರರ ಸಭೆ ಕರೆದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡದೆ ಅಡಿಕೆ ಆಮದು ಮಾಡಿಕೊಳ್ಳುವ ಸಮರ್ಥನೆಗೆ ಇಳಿದಿದ್ದಾರೆ ಎಂದು ಹೇಳಿದರು.