ಯಡಿಯೂರಪ್ಪನವರು ಇತ್ತೀಚೆಗೆ ಜನಸಂಕಲ್ಪ ಯಾತ್ರೆಯೊಂದರಲ್ಲಿ ಮೋದಿಯವರನ್ನು ಟೀಕಿಸುವವರ ವಿರುದ್ಧ ಆ ಕ್ಷಣದಲ್ಲಿಯೆ ಪ್ರತಿಭಟಿಸಿ ಎಂದು ಕಾರ್ಯಕರ್ತರಿಗೆ ಆಜ್ಞೆ ಹೊರಡಿಸುವ ಧ್ವನಿಯಲ್ಲಿ ಹೇಳಿದ್ದಾರೆ. ಯಡಿಯೂರಪ್ಪನವರಿಗೆ ಈ ಕೆಳಕಂಡ ಪ್ರಶ್ನೆಗಳನ್ನು ಜವಾಬ್ಧಾರಿಯುತ ವಿರೋಧ ಪಕ್ಷದ ನಾಯಕನಾದ ನಾನು ಕೇಳಬಯಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
2014ಕ್ಕೂ ಮೊದಲು ಮನಮೋಹನ್ ಸಿಂಗ್ ಸರ್ಕಾರ ರೈತರ ಎಷ್ಟು ಸಾಲವನ್ನು ಮನ್ನಾ ಮಾಡಿತ್ತು? ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಎಷ್ಟು ಸಾಲವನ್ನು ಮನ್ನಾ ಮಾಡಲಾಗಿತ್ತು? ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯಾರ್ಯಾರ ಎಷ್ಟು ಸಾಲವನ್ನು ಮನ್ನಾ ಮಾಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜನರು ಕಟ್ಟುತ್ತಿದ್ದ ತೆರಿಗೆ ಎಷ್ಟು? ಕಾರ್ಪೊರೇಟ್ ಬಂಡವಾಳಿಗರು ಪಾವತಿಸುತ್ತಿದ್ದ ತೆರಿಗೆ ಎಷ್ಟಿತ್ತು? ಈಗ ಎಷ್ಟಿದೆ? ಜನರ ಮೇಲಿನ ತೆರಿಗೆ ಹೆಚ್ಚಿಸಿ ಅದಾನಿ, ಅಂಬಾನಿ ಮುಂತಾದವರ ಮೇಲಿದ್ದ ತೆರಿಗೆಯನ್ನು ಶೇ.8 ರಷ್ಟು ಇಳಿಸಿದ್ದು ಏಕೆ?
2014 ಕ್ಕೆ ಮೊದಲು ಪೆಟ್ರೋಲ್, ಡೀಸೆಲ್‍ಗಳ ಮೇಲೆ ವಿಧಿಸುತ್ತಿದ್ದ ಸೆಸ್‍ಗಳೆಷ್ಟು? ಮೋದಿಯವರು ವಿಧಿಸುತ್ತಿರುವ ಸೆಸ್‍ಗಳ ಪ್ರಮಾಣವೆಷ್ಟು?
ಇದರಿಂದಾಗಿ ಪೆಟ್ರೋಲ್, ಡೀಸೆಲ್‍ಗಳ ಬೆಲೆ ಹಿಂದೆ ಎಷ್ಟಿತ್ತು? ಈಗ ಎಷ್ಟಿದೆ? 2014 ರ ಮೊದಲು 10 ವರ್ಷಗಳ ಕಚ್ಛಾ ತೈಲದ ಸರಾಸರಿ ಬೆಲೆಗಳು ಎಷ್ಟಿತ್ತು? 2014 ರಿಂದ ಇದುವರೆಗೆ ಕಚ್ಛಾ ತೈಲದ ಸರಾಸರಿ ಬೆಲೆಗಳು ಎಷ್ಟು? ಎಂದು ಪ್ರಶ್ನೆಗಳ ಸುರಿಮಳೆ ಕರೆದಿದ್ದಾರೆ.