ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ, ತಮಿಳುನಾಡು ಮೂಲಕ ಕರ್ನಾಟಕಕ್ಕೆ ಆಗಮಿಸಿರುವ ಭಾರತ ಜೋಡೋ ಯಾತ್ರೆ ಇದೀಗ ಬಳ್ಳಾರಿಗೆ ಆಗಮಿಸಿದೆ.
ರಾಜ್ಯದ ಎಲ್ಲಾ ಜಾತಿ, ಧರ್ಮ, ಪ್ರದೇಶದ ಜನರು, ಮಹಿಳೆಯರು, ರೈತರು, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ವಿಕಲಚೇತನರು, ಲೈಂಗಿಕ ಅಲ್ಪಸಂಖ್ಯಾತರು, ಯುವಕರು, ವೃದ್ಧರು, ಮಕ್ಕಳು ಹೀಗೆ ಎಲ್ಲಾ ವರ್ಗದ ಜನರು ಸಾಗರೋಪಾದಿಯಲ್ಲಿ ರಾಹುಲ್ ಗಾಂಧಿ ಜೊತೆ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ನಿರುದ್ಯೋಗ, ಬೆಲೆ ಏರಿಕೆಯ ಪ್ರಶ್ನೆಗಳ ಜೊತೆಗೆ ದ್ವೇಷದ ವಿರುದ್ಧ ಪ್ರೀತಿ, ಸೌಹಾರ್ದತೆಯ ಮೂಲಕ ಸಮಾಜವನ್ನು ಬೆಸೆಯುತ್ತಾ ಭಾರತವನ್ನು ಒಗ್ಗೂಡಿಸುತ್ತಾ ಯಾತ್ರೆ ಬಳ್ಳಾರಿಗೆ ಆಗಮಿಸಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಹಿಂದೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹಾಗಾಗಿ ಬಳ್ಳಾರಿ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಹಿನ್ನೆಲೆ ಹೊಂದಿರುವ ಕ್ಷೇತ್ರವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಬಳ್ಳಾರಿಗೆ ಆಗಮಿಸಿರುವ ರಾಹುಲ್ ಗಾಂಧಿ ಅವರು ಸೇರಿದಂತೆ ಭಾರತ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ಎಲ್ಲಾ ಯಾತ್ರಿಗರನ್ನು ಸ್ವಾಗತಿಸಲಾಗಿದೆ. ಜೊತೆಗೆ ಇಂದು ಬೃಹತ್ ಸಮಾವೇಶವೂ ನಡೆಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.