ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅಕ್ಟೋಬರ್ 10 ರಂದು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮುಲಾಯಂ ಸಿಂಗ್ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
10 ಬಾರಿ ವಿಧಾನಸಭಾ ಸದಸ್ಯರಾಗಿ, ಏಳು ಬಾರಿ ಲೋಕಸಭಾ ಸದಸ್ಯರಾಗಿ, ಒಮ್ಮೆ ಭಾರತದ ರಕ್ಷಣಾ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರನ್ನು ಆಗಸ್ಟ್ 22 ರಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದು ವಾರದ ಹಿಂದೆ ಮುಲಾಯಂ ಅವರನ್ನು ತುರ್ತ ನಿಗಾ ಘಟಕದಲ್ಲಿ ಇಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ನವೆಂಬರ್ 22, 1939ರಂದು ಮಧ್ಯ ಉತ್ತರ ಪ್ರದೇಶದ ಇಟ್ವಾ ಜಿಲ್ಲೆಯ ಸೈಪಾಯಿ ಗ್ರಾಮದಲ್ಲಿ ಜನಿಸಿದ ಮುಲಾಯಂ ಸಿಂಗ್ ಯಾದವ್ ಇಟಾವಾದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು. ನಂತರ ಫತೇಹಾಬಾದ್ ಮತ್ತು ಆಗ್ರಾದಲ್ಲಿ ಶಿಕ್ಷಣ ಪಡೆದರು.
ಮುಲಾಯಂ ಪ್ರಸಿದ್ದ ಕುಸ್ತಿ ಪಟು ಆಗಿದ್ದರು. ಅವರು ಪದವಿ ಮತ್ತು ಬ್ಯಾಚುಲರ್ ಆಫ್ ಟೀಚಿಂಗ್ ಮುಗಿಸಿದ ನಂತರ ಆಗ್ರಾ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಚಾಣಾಕ್ಷ ರಾಜಕಾರಣಿ ಮುಲಾಯಂ ಅವರು ಮೈನ್ ಪುರಿ ಜಿಲ್ಲೆಯ ಕರ್ಹಾಲ್ ನಲ್ಲಿರುವ ಜೈನ್ ಇಂಟರ್ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. 1955ರಲ್ಲಿ 9ನೇ ತರಗತಿಗೆ ಪ್ರವೇಶ ಪಡೆದಾಗ ಅದೇ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಮಾಡಿದ್ದರು.
1960ರಲ್ಲಿ ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರ ನೇತೃತ್ವದ ಚಳವಳಿಯಲ್ಲಿ ಸಮಾಜವಾದಿ ನಾಯಕರಿಂದ ಪ್ರಭಾವಿತರಾದ ಮುಲಾಯಂ ಅವರು ಸಕ್ರಿಯವಾಗಿ ಭಾಗವಹಿಸಲು ಪ್ರಾರಂಭಿಸಿದಾಗ ಮುಲಾಯಂ ರಾಜಕೀಯಕ್ಕೆ ಆಕರ್ಷಿತರಾದರು. 1967ರಲ್ಲಿ ಜಸ್ವಂತನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು.
ಉತ್ತರಪ್ರದೇಶಲ್ಲಿ ವಿವಿಧ ಕ್ಷೇಥ್ರಗಳನ್ನು ಪ್ರತಿನಿಧಿಸಿ 10 ಬಾರಿ ಶಾಸಕ ಮತ್ತು ಏಳು ಬಾರಿ ಸಂಸದರಾಗಿರುವ ಮುಲಾಯಂ ಅವರು 1992ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. 1989ರಲ್ಲಿ ಮೊದಲ ಬಾರಿಗೆ ಯುಪಿ ಸಿಎಂ ಆದರು. ಅವರು 1989-1991 ರವರೆಗೆ ಮೂರು ಬಾರಿ ಯುಪಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. 1996=1998ರ ಅವಧಿಯಲ್ಲಿ ದೇಶದ ರಕ್ಷಣಾ ಸಚಿವರಾಗಿದ್ದರು.
ಪ್ರಧಾನಿ ಮೋದಿ ಸಂತಾಪ:
ಪ್ರಸ್ತುತ ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಮೈನ್ ಪುರಿ ಸಂಸದರಾಗಿದ್ದರು. ಮುಲಾಯಂ ಸಿಂಗ್ ಯಾದವ್ ಯುಪಿ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ತುರ್ತುಪರಿಸ್ಥಿತಿಯ ಸಂದರ್ಭಧಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೇನಾನಿಯಂತೆ ಕಾರ್ಯನಿರ್ವಹಿಸಿದರು. ಅವರು ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಒತ್ತು ನೀಡಿದ್ದರು ಎಂದು ಪ್ರಧಾನ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.