ಜಾತಿ, ಭಾಷೆ, ಧರ್ಮ, ಆಹಾರದ ಹೆಸರಿನಲ್ಲಿ ಜನರ ನಡುವೆ ಉಂಟಾಗಿರುವ ಕಂದಕವನ್ನು ದೂರ ಮಾಡುವ ಉದ್ದೇಶದಿಂದ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಗೆ ಕ್ರಾಂತಿಕಾರಿ, ವಿಶ್ವಮಾನವ ಕುವೆಂಪು ವೇದಿಕೆ ಹಾಗೂ ಭಾವೈಕ್ಯ ಕರ್ನಾಟಕ ಸಂಘಟನೆಗಳು ಬೆಂಬಲ ನೀಡಿವೆ.
ತುಮಕೂರಿನಲ್ಲಿ ಮಾತನಾಡಿದ ಕರ್ನಾಟಕ ಕೃಷಿ ಬೆಲೆ ನಿಗದಿ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಪಕ್ಷವನ್ನು ಮುಂದಿಟ್ಟು ಕೊಳ್ಳದೆ ಪಕ್ಷಾತೀತವಾಗಿ ಭಾರತದ ಮನಸ್ಸುಗಳನ್ನು ಜೋಡಿಸುವ ಕೆಲಸಕ್ಕೆ ರಾಹುಲ್‌ಗಾಂಧಿ ಮುಂದಾಗಿದ್ದಾರೆ, ಆರಂಭದಿಂದಲೂ ಕಾಂಗ್ರೆಸ್ ಪಕ್ಷದ ಕೆಟ್ಟ ನೆಡೆಗಳನ್ನು ಟೀಕಿಸುತ್ತಲೇ ಬಂದಿರುವ ನಾವು ಮನೆಗೆ ಬೆಂಕಿ ಬಿದ್ದಾಗ ಮೊದಲು ಆರಿಸುವ ಕೆಲಸ ಮಾಡಬೇಕೇ ಹೊರತು, ಆರಿಸಲು ಬಂದಿರುವವರ ಹಿನ್ನೆಲೆಗಳನ್ನು ಹುಡುಕಬಾರದು ಎಂದರು.
ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಇಂದೂಧರ ಹೊನ್ನಾಪುರ ಮಾತನಾಡಿ,ಕಾಂಗ್ರೆಸ್ ಪಕ್ಷ 1970ರಲ್ಲಿ ದೇಶದ ಮೇಲೆ ಅಧಿಕೃತವಾಗಿ ತುರ್ತು ಪರಿಸ್ಥಿತಿ ಘೋಷಿಸಿತ್ತು. ಆದರೆ ಇಂದು ಆಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶದ ಆಡಳಿತದ ವೈಫಲ್ಯಗಳನ್ನು ಪ್ರಶ್ನಿಸಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ ಎಂದು ಆರೋಪಿಸಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡಿ, ಇದುವರೆಗು ಗಳಿಸಿಟ್ಟ ದೇಶದ ಆಸ್ತಿಯನ್ನು ಬೇಕಾಬಿಟ್ಟಿ ಮಾರಾಟ ಮಾಡಲಾಗುತ್ತಿದೆ.ನ್ಯಾಯಾಂಗ, ಪತ್ರಿಕಾರಂಗಗಳು ಸ್ವಾತಂತ್ರವಾಗಿ ಕಾರ್ಯ ನಿರ್ವಹಿಸದಂತಹ ಸ್ಥಿತಿಗೆ ತಲುಪಿವೆ. ದಲಿತರು, ಅಲ್ಪಸಂಖ್ಯಾತರು ಮೇಲಿನ ದಾಳಿಗಳು ಹೆಚ್ಚಾಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಹುಲ್‌ಗಾಂಧಿ ದೇಶವನ್ನು ಒಗ್ಗೂಡಿಸುವ ಯಾತ್ರೆಗೆ ನಾವು ಬೆಂಬಲ ನೀಡುತ್ತೇವೆ ಎಂದರು.
ಬೆಂಗಳೂರು ವಿವಿ ಮಾಜಿ ಕುಲಪತಿ ಡಾ.ಜಾಫೆಟ್ ಮಾತನಾಡಿ, ಜಾತ್ಯತೀತ ಪರಂಪರೆ ಕರ್ನಾಟಕದ ವೈಶಿಷ್ಟ್ಯ, ಇಂತಹ ಕಡೆ ಒಂದು ಭಾಷೆ, ಸಂಸ್ಕೃತಿ, ಬಟ್ಟೆ, ಆಹಾರದ ವಿಚಾರದಲ್ಲಿ ಮಕ್ಕಳಲ್ಲಿ ವಿಷ ತುಂಬುವ ಕೆಲಸ ನಡೆಯುತ್ತಿದೆ. ಇದರ ವಿರುದ್ದ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಭವಿಷ್ಯದ ಪ್ರಜೆಗಳಲ್ಲಿ ಅರಿವು ಮೂಡಿಸಲು ನಾವೆಲ್ಲರೂ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.
ಚಿಂತಕ ಕೆ.ದೊರೆರಾಜು ಮಾತನಾಡಿ, ಜಾತಿ, ಧರ್ಮದ ಭಾವನಾತ್ಮಕ ವಿಚಾರಗಳ ಮೂಲಕ ಸಾಮಾಜಿಕ ಸನ್ನಿವೇಶವೇ ಹದಗೆಡುವಂತಹ ವಾತಾವರಣ ನಿರ್ಮಾಣವಾಗಿದೆ. ಮಾನವೀಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಯಾರೇ ಮುಂದಾದರೂ ಅವರನ್ನು ಬೆಂಬಲಿಸುವ ಕೆಲಸವನ್ನು ಜಾತ್ಯತೀತ ನೆಲೆಯಲ್ಲಿ ಆಲೋಚಿಸುವ ನಾವುಗಳು ಮಾಡಬೇಕಾಗಿದೆ ಎಂದು ತಿಳಿಸಿದರು.