Thursday, November 21, 2024
Google search engine
Homeಇತರೆನಟ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾದಲ್ಲಿ ಹಾಸ್ಯರಸಾಯನ ಹೆಚ್ಚು

ನಟ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾದಲ್ಲಿ ಹಾಸ್ಯರಸಾಯನ ಹೆಚ್ಚು

ರವಿಕೃಷ್ಣಾರೆಡ್ಡಿ

ಬಹುಶಃ 28-29 ವರ್ಷಗಳ ಹಿಂದೆ ನಾನು ಜಗ್ಗೇಶರ ಸಿನೆಮಾ ನೋಡಿದ್ದು. ಅದು “ಭಂಡ ನನ್ನ ಗಂಡ.” ಸುಮಾರಾಗಿ, ಚೆನ್ನಾಗಿ ಇತ್ತು. ಅದಾದ ನಂತರ ಜಗ್ಗೇಶರ ಯಾವ ಸಿನಿಮಾವನ್ನೂ ಥಿಯೇಟರ್‌ನಲ್ಲಾಗಲಿ, ಟಿವಿ/ಕಂಪ್ಯೂಟರ್/ಮೊಬೈಲ್‌ನಲ್ಲಾಗಲಿ ನೋಡಿದ ನೆನಪಿಲ್ಲ. “ಮಠ” ನೋಡಿ, “ಎದ್ದೇಳು ಮಂಜುನಾಥ” ನೋಡಿ ಎಂದು ಸ್ನೇಹಿತರು ಹೇಳುತ್ತಿದ್ದರು. ಆದರೆ ಜಗ್ಗೇಶರ ಕೆಲವು ಜವಾಬ್ದಾರಿಹೀನ, ಸಂವೇದನಾರಹಿತ, ಕೀಳು ಅಭಿರುಚಿಯ ರಾಜಕೀಯ ಮತ್ತು ಸಾಮಾಜಿಕ ಹೇಳಿಕೆಗಳ ಕಾರಣಕ್ಕೆ ಅವರ ಯಾವ ಸಿನಿಮಾ ನೋಡಲೂ ನನಗೆ ಮನಸ್ಸಾಗಲಿಲ್ಲ.

ಜಗ್ಗೇಶ್ ಒಳ್ಳೆಯ ಕಲಾವಿದ. ಅದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಬಹಳ ಧೈರ್ಯ ಮತ್ತು ಪರಿಶ್ರಮದಿಂದ ಜೀವನ ಕಟ್ಟಿಕೊಂಡವರು. ಆದರೆ ಅವಕಾಶವಾದಿ ರಾಜಕಾರಣಿ. ಮೊದಲೇ ಹೇಳಿದಂತೆ ಕೀಳು ಅಭಿರುಚಿಯ ರಾಜಕೀಯ ಹೇಳಿಕೆಗಳನ್ನು ಕೊಡುತ್ತಾ ಬಂದವರು ಮತ್ತು ಘನತೆರಹಿತ ರಾಜಕಾರಣ ಮಾಡಿದವರು. ಹಾಗಾಗಿಯೇ ಇವರ ಬಗ್ಗೆ ಒಳ್ಳೆಯ ಮಾತನಾಡಲು ನನಗೆಂದೂ ಮನಸ್ಸು ಬರಲಿಲ್ಲ.

ಇಂದು ಯಾವುದ್ಯಾವುದೋ ಕಾರಣಕ್ಕೆ #ತೋತಾಪುರಿ ಸಿನೆಮಾ ನೋಡಿದೆ. ತಪ್ಪೇನೂ ಆಗಲಿಲ್ಲ. ಇದು ನಿರ್ದೇಶಕರ ಚಿತ್ರ.

ಒಂದು ರೀತಿಯಲ್ಲಿ ಜಗ್ಗೇಶರ ಇತ್ತೀಚಿನ ರಾಜಕೀಯ ನಡವಳಿಕೆ/ನಿರ್ಧಾರಗಳ ಪ್ರಾಯಶ್ಚಿತ್ತದಂತೆ ಈ ಸಿನೆಮಾ ಇದೆ.

ನಿರ್ದೇಶಕ ವಿಜಯಪ್ರಸಾದ್‌ ಹಲವಾರು ಚಿಂತನಾರ್ಹ ವಿಚಾರಗಳನ್ನು ಈ ಚಿತ್ರದಲ್ಲಿ ತಂದಿದ್ದಾರೆ. ಹೆಣ್ಣು ಮಕ್ಕಳ ಹಲವು ರೀತಿಯ ಸಮಸ್ಯೆಗಳು, ಜಾತಿ ತಾರತಮ್ಯ, ವರ್ಗ ತಾರತಮ್ಯ, ಮತೀಯತೆ, ಹೀಗೆ. ಬಹಳ ಗಂಭೀರವಾದ ವಿಚಾರಗಳನ್ನು ತಮಾಷೆ ಮತ್ತು ದ್ವಂದ್ವಾರ್ಥಗಳಲ್ಲಿ ಮುಳುಗಿಸಿ ತೇಲಿಸುವ ಕಾರಣ ಚಿತ್ರದ ಮೊದಲಾರ್ಧದಲ್ಲಿ ಬಹಳಷ್ಟು ವಿಷಯಗಳು ಗಂಭೀರತೆ ಕಳೆದುಕೊಳ್ಳುತ್ತವೆ. ಆದರೆ ದ್ವಿತೀಯಾರ್ಧದಲ್ಲಿ ಅದು ಸರಿಹೋಗುತ್ತ ಮತ್ತೆ ಕೊನೆಗೆ ಹಾಸ್ಯವೇ ಮೇಲುಗೈ ಸಾಧಿಸುತ್ತದೆ. ಇಷ್ಟೆಲ್ಲಾ ಆದರೂ ಈ ಚಿತ್ರ ಹಲವು ವಿಚಾರಗಳ ಬಗ್ಗೆ ಜನರನ್ನು ಚಿಂತನೆಗೆ ದೂಡುತ್ತದೆ. ಸಂವಾದ ರೂಪದಲ್ಲಿ ನಿರೂಪಕರು ಪ್ರೇಕ್ಷಕರನ್ನೇ ಪ್ರಶ್ನಿಸುತ್ತಾರೆ.

ಇಡೀ ಚಿತ್ರದಲ್ಲಿ ಅತ್ಯುತ್ತಮ ನಟನೆ ಎಂದರೆ ನಂಜಮ್ಮ’ನ ಪಾತ್ರ ಮಾಡಿರುವ ಹೇಮಾ ದತ್’ರದು. ಎಲ್ಲರಿಗಿಂತ ದಿಟ್ಟ ಪಾತ್ರವದು. ನಟಿ ಅದಿತಿ ಪ್ರಭುದೇವ ಸಹ ಚೆನ್ನಾಗಿ ನಟಿಸಿದ್ದಾರೆ. ಸಂಭಾಷಣೆಯಲ್ಲಿ ಸಂಯಮ ಇಲ್ಲದಿದ್ದರೂ ಜಗ್ಗೇಶ್ ಸಂಯಮದಿಂದ ನಟಿಸಿದ್ದಾರೆ. ನಿರ್ದೇಶಕರ ಕಸುಬುದಾರಿಕೆ ಚೆನ್ನಾಗಿದೆ. (ಆದರೂ ಮೂವರು ವ್ಯಕ್ತಿಗಳ ಮೂಲಕ ನಿರೂಪಣೆ ಮಾಡಿಸಿರುವುದು ಅನಗತ್ಯವಾಗಿತ್ತು. ಪ್ರವಚನಕಾರಿ.)

ಬಜಾಜ್ ಚೇತಕ್ ಸ್ಕೂಟರ್ ಓಡಿಸುವ ಮಧ್ಯವಯಸ್ಕ ಹೆಣ್ಣು, ಟಿವಿಎಸ್ ಮೊಪೆಡ್ ಓಡಿಸುವ ಮತ್ತೊಂದು ಹೆಣ್ಣು, ಅವರಿಬ್ಬರ ಹಿಂದೆ ಹಿಂಬದಿಯ ಸೀಟಿನಲ್ಲಿ ಕುಳಿತು ಹೋಗುವ ನಾಯಕ ಪಾತ್ರಧಾರಿ, ತನ್ನ ಸಂಪ್ರದಾಯವಾದಿ ಕುಟುಂಬದವರನ್ನು ಅಂಬಾಸಡರ್ ಕಾರಿನಲ್ಲಿ ಕೂರಿಸಿಕೊಂಡು ಕಾರು ಚಲಾಯಿಸುವ ಮುಸ್ಲಿಂ ಯುವತಿ; ಇಂತಹ ದೃಶ್ಯಗಳ ಮೂಲಕ ನಿರ್ದೇಶಕರು ಬಹಳಷ್ಟನ್ನು ಸದ್ದಿಲ್ಲದೆ ಹೇಳುತ್ತಾರೆ. ಇಂತಹ ಸೂಕ್ಷ್ಮತೆ ಮತ್ತು ನೋಟ ಇರುವ ನಿರ್ದೇಶಕ ಬಹಳಷ್ಟನ್ನು ವಾಚ್ಯವಾಗಿ ಹೇಳಲು ಪ್ರಯತ್ನಿಸಿರುವುದು ಮಾತ್ರ ಆಶ್ಚರ್ಯಕರ. ಬಹುಶಃ ಅದು ಅವರಿರುವ ರಂಗದಲ್ಲಿ ಮತ್ತು ಪರಿಸ್ಥಿತಿಯಲ್ಲಿ Inevitable ಇರಬಹುದು.

ಇದು ಮಕ್ಕಳೊಡನೆ ಕೂತು ನೋಡುವ ಸಿನೆಮಾ ಅಲ್ಲ. ಅಶ್ಲೀಲ ದೃಶ್ಯಗಳೇನೂ ಇಲ್ಲ. ಆದರೆ ದ್ವಂದ್ವಾರ್ಥದ ಸಂಭಾಷಣೆಗಳಿಗೆ ವಯಸ್ಕರು ಗೊಳ್ಳೆಂದು ನಗುತ್ತಿರುವಾಗ ಮಕ್ಕಳು ಯಾಕೆ ಎಂದು ಕೇಳಿದರೆ ಹೇಗೆ ಉತ್ತರಿಸುತ್ತೀರಿ? ಆದರೆ ವಯಸ್ಕರಲ್ಲಿ ಈ ಸಿನೆಮಾ ಒಂದಷ್ಟು ಸಂವೇದನೆ ಹುಟ್ಟಿಸುತ್ತದೆ, ಉದ್ದೀಪಿಸುತ್ತದೆ.

ಅಂದಹಾಗೆ, ಇದು ಮೊದಲ ಭಾಗ. ಹಾಗಾಗಿ ಕತೆ ಅಪೂರ್ಣ. ಎರಡನೆಯ ಭಾಗದಲ್ಲಿ ಇನ್ನೊಂದಷ್ಟು ಪಾತ್ರಗಳು ಬರಲಿವೆ ಎನ್ನುವುದು ಚಿತ್ರದ ಅಂತ್ಯದಲ್ಲಿ ಬರುವ ಅದರ ಟ್ರೈಲರ್ ಹೇಳುತ್ತದೆ. ಆದರೆ ತೋತಾಪುರಿ ಮೊದಲ ಭಾಗವೂ ಒಂದು ರೀತಿಯಲ್ಲಿ ಸ್ವತಂತ್ರವಾಗಿ ನಿಲ್ಲುವ ಚಿತ್ರ. ಹಾಗಾಗಿ ಅಪೂರ್ಣ ಅನ್ನಿಸುವುದಿಲ್ಲ.

ಇಂದಿನ ಹಲವು ಗಂಭೀರ ಸಾಮಾಜಿಕ ವಿಷಯಗಳನ್ನು (ಹಾಸ್ಯವಾಗಿ) ಎತ್ತುವ ಕಾರಣಕ್ಕೆ ಈ ಸಿನೆಮಾವನ್ನು ನೋಡಬಹುದು. ಹಾಸ್ಯರಸಾಯನವಂತೂ ಸಿಗುತ್ತದೆ.

ಲೇಖಕರು, ಅಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular