ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೆಚ್ಚಿಸಿರುವ ಪರೀಕ್ಷಾ ಶುಲ್ಕಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕಾರ್ಯಕರ್ತರು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ, ಮೌಲ್ಯಮಾಪನ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಿವಿಯು ಹೆಚ್ಚಳ ಮಾಡಿರುವ ಶುಲ್ಕವನ್ನು ಕಟ್ಟಲು ಕಷ್ಟವಾಗುತ್ತದೆ. ಹಾಗಾಗಿ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ, ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಮತ್ತು ದಾಖಲಾತಿ ಶುಲ್ಕಗಳು ಅವೈಜ್ಞಾನಿಕವಾಗಿದೆ. ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿಯ ಶುಲ್ಕ ಪಾವತಿಸಿಕೊಳ್ಳಲಾಗುತ್ತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಹಾಗಾಗಿ ಹೆಚ್ಚಿಸಿರುವ ಶುಲ್ಕ ವಾಪಸ್ ಪಡೆಯುವಂತೆ ಆಗ್ರಹಿಸಿದರು.
ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಏಕರೂಪದ ದಾಖಲಾತಿ ಶುಲ್ಕ ಮತ್ತು ಪರೀಕ್ಷಾ ಶುಲ್ಕಗಳನ್ನು ಜಾರಿ ಮಾಡಬೇಕು. ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಆದರೆ ವಿದ್ಯಾರ್ಥಿನಿಯರಿಂದ ಹೆಚ್ಚುವರಿ ಶುಲ್ಕ ಪಡೆದುಕೊಳ್ಳಲಾಗುತ್ತಿದೆ. ಇದನ್ನು ಸರಿಪಡಿಸಲು ವಿವಿ ಮುಂದಾಗಬೇಕು ಎಂದು ಹೇಳಿದರು.

ಭಾರತ ವಿದ್ಯಾರ್ಥಿ ಫೆಡರೇಷನ್ ತುಮಕೂರು ನಗರಾಧ್ಯಕ್ಷ ಶಶಿವರ್ಧನ್ ಮಾತನಾಡಿ, ಜಿಲ್ಲೆಯ ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದು ಅವರಿಗೆ ಇಷ್ಟೊಂದು ಪ್ರಮಾಣದ ಪರೀಕ್ಷಾ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ. ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಆದ್ದರಿಂದ ಹೆಚ್ಚುವರಿ ಶುಲ್ಕವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಜಿ.ಕೆ.ನಾಗಣ್ಣ ಮಾತನಾಡಿ ವಿಶ್ವವಿದ್ಯಾಲಯದಲ್ಲಿ ನಿಗದಿಪಡಿಸಿರುವ ಶುಲ್ಕ ಪಾವತಿಸಲು ಗೊಂದಲಗಳಿವೆ. ಇದನ್ನು ಸರಿಪಡಿಸಬೇಕು. ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಿಸಬೇಕು ಎಂದರು. ಸರ್ಕಾರದಿಂದ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ನೇರವಾಗಿ ಕಾಲೇಜಿಗೆ ಕಳುಹಿಸಲಾಗುತ್ತಿದೆ. ಅದನ್ನು ವಿದ್ಯಾರ್ಥಿಗಳಿಗೆ ವಾಪಸ್ಸು ನೀಡುತ್ತಿಲ್ಲ. ಹಾಗಾಗಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನವೀನ್, ಅಜಯ್, ಪಾವನಿ, ಸೌಮ್ಯ, ಶಶಿಕಲಾ, ರಾಧಿಕ, ಚಂದ್ರಕಲಾ, ಸೂಫಿಯ, ಪಾವನ ಮೊದಲಾದವರು ಉಪಸ್ಥಿತರಿದ್ದರು.


