ಭಾನುವಾರ ಜೈಪುರದಲ್ಲಿ ನಡೆದ ಘಟನೆಗಳ ನಂತರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಾಯಕತ್ವವು ಹೆಚ್ಚು ಒಲವು ತೋರದಿರುವುದರಿಂದ ಅನಿಶ್ಚಿತತೆಯ ಭಾವನೆ ಆವರಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನಾಮನಿರ್ದೇಶನ ಪ್ರಕ್ರಿಯೆ ಮುಕ್ತಾಯಗೊಳ್ಳಲು ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು ಸ್ಪರ್ಧೆಯ ಸಂದರ್ಭದಲ್ಲಿ ತಟಸ್ಥತೆಯನ್ನು ಪ್ರತಿಪಾದಿಸಿದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ನಾಯಕತ್ವ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರನ್ನು ದೆಹಲಿಗೆ ಕರೆಸಿ ಚರ್ಚೆ ನಡೆಸಲಾಗಿದೆ. 81ರ ಹರೆಯದ ಹಿರಿಯ ನಾಯಕ ಆಂಟನಿ ಸ್ಪರ್ಧಿಸುವುದಿಲ್ಲ ಎಂದು ಅವರ ನಿಕಟ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿರಿಯ ನಾಯಕರನ್ನು ಸಂಪರ್ಕಿಸುವ ಮಾರ್ಗವನ್ನು ಕಂಡುಕೊಳ್ಳುವ ಸೂಚನೆಯಾಗಿದೆ. ಆದರೂ ಆಂಟನಿ ಮತ್ತು ಮಧ್ಯಪ್ರದೇಶದ ಕಮಲ್ ನಾಥ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ತೋರಿಲ್ಲ ಎಂದು ಹೇಳಲಾಗಿದೆ.
ಸಂಸದ ಶಶಿ ತರೂರ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ ಮತ್ತು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು ಅಂದು ಶಶಿ ತರೂರ್ ನಾಮಪತ್ರ ಸಲ್ಲಿಸಲಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಸೋಮವಾರ ಎರಡು ಸೆಟ್ ನಾಮಪತ್ರಗಳನ್ನು ಸಂಗ್ರಹಿಸಿದ್ದಾರೆ. ಆದರೆ ಯಾರು ಪರಿಗಣಿಸುತ್ತಾರೆ ಎಂಬುದು ಸ್ಪಷ್ಟತೆ ಇಲ್ಲ. ಬಹುಶಃ ಕೊನೆಯ ಕ್ಷಣದಲ್ಲಿ ಒಮ್ಮತವನ್ನು ತಲುಪಬಹುದು ಎನ್ನಲಾಗಿದೆ.