Sunday, December 22, 2024
Google search engine
Homeಮುಖಪುಟಲೋಕಾಯುಕ್ತ ಬಲಪಡಿಸಲು ಸಮಾಜ ಪರಿವರ್ತನಾ ಸಮುದಾಯ ಆಗ್ರಹ

ಲೋಕಾಯುಕ್ತ ಬಲಪಡಿಸಲು ಸಮಾಜ ಪರಿವರ್ತನಾ ಸಮುದಾಯ ಆಗ್ರಹ

ಜನಾಂದೋಲನ ಮಹಾಮೈತ್ರಿ ಮತ್ತು ಇತರೆ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸೆಪ್ಟೆಂಬರ್ 24ರಂದು ತುಮಕೂರಿನಲ್ಲಿ ಸತ್ಯಾಗ್ರಹ ವಿಚಾರ ಆಚಾರ ಕುರಿತು ಒಂದು ದಿನ ಚಿಂತನ ಶಿಬಿರವನ್ನು ಆಯೋಜಿಸಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಅಧ್ಯಕ್ಷ ಎಸ್.ಆರ್. ಹಿರೇಮಠ್ ಹೇಳಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಮೂರು ರೈತ ವಿರೋಧಿ ಕಾರ್ಪೋರೇಟ್ ಸ್ನೇಹಿ ಕೃಷಿ ಕಾಯಿದೆಗಳನ್ನು ರದ್ದುಪಡಿಸುವುದು, ಕನಿಷ್ಠ ಬೆಂಬಲ ಬೆಲೆಯನ್ನು ಹಾಗೂ ಧಾನ್ಯಗಳ ಸಂಗ್ರಹ ಕ್ರಮವನ್ನು ಕಾಯಿದೆಬದ್ದಗೊಳಿಸುವ ಬಗ್ಗೆ ಶಿಬಿರದಲ್ಲಿ ಚರ್ಚೆ ನಡೆಯಲಿದೆ ಎಂದರು.

ಸೆಪ್ಟೆಂಬರ್ 25ರಂದು ರಾಜ್ಯಮಟ್ಟದ ಸತ್ಯಾಗ್ರಹ ಸಮಿತಿಯ ಸಭೆ ನಡೆಯಲಿದೆ. ಎಸಿಬಿಯನ್ನು ಅನೂರ್ಜಿತಗೊಳಿಸಿರುವುದನ್ನು ಸಮಾಜ ಪರಿವರ್ತನಾ ಸಮುದಾಯ, ಜನ ಸಂಗ್ರಾಮ ಪರಿಷತ್, ಜನಾಂದೋಲನ ಮಹಾಮೈತ್ರಿ ಮುಂತಾದ ಸಮಾನ ಮನಸ್ಕ ಸಂಘಟನೆಗಳು ಸ್ವಾಗತಿಸುತ್ತೇವೆ. ಹಾಗೆಯೇ ಲೋಕಾಯುಕ್ತವನ್ನು ಬಲಪಡಿಸುವುದಕ್ಕಾಗಿ ಇದರ ಬಗ್ಗೆ ಕಳಕಳಿಯಿರುವ ಎಲ್ಲರೂ ಒಟ್ಟುಗೂಡಿ ಪ್ರಬಲವಾದ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ಲೋಕಾಯುಕ್ತದ ಎಸಿಬಿ ಪೂರ್ವದ ಅಧಿಕಾರಗಳ ಮರುಸ್ಥಾಪನೆ ಮತ್ತು ಪ್ರಸ್ತುತ ಬೊಮ್ಮಾಯಿ ಸರ್ಕಾರ ಉಚ್ಚ ನ್ಯಾಯಾಲಯದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಉಚ್ಚ ನ್ಯಾಯಾಲಯದ ತೀರ್ಪಿನ ಭಾಗ 16ರಲ್ಲಿ ಚಿಂತನೀಯವಾದ ಐದು ಶಿಫಾರಸುಗಳಿವೆ. ಲೋಕಾಯುಕ್ತವನ್ನು ಶಕ್ತಿಯುತ ಮಾಡಲು ನ್ಯಾಯಾಲಯ ಶಿಫಾರಸುಗಳನ್ನು ನೀಡಿದೆ. ಬೊಮ್ಮಾಯಿ ಸರ್ಕಾರ ತನಗೆ ಅನುಕೂಲವಾಗುವಂತೆ ಅವುಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಅಲ್ಲದೆ ನ್ಯಾಯಾಲಯವು ಸಂವಿಧಾನಿಕ ಸಂಸ್ಥೆಗಳು ಪ್ರಾಮಾಣಿಕವಾದ ಸ್ವಜನಪಕ್ಷಪಾತದಿಂದ ಮುಕ್ತರಾದ ಹಾಗು ಸಾಮರ್ಥ್ಯ, ಅರ್ಹತೆ ಉಳ್ಳವರನ್ನು ಲೋಕಾಯುಕ್ತ ಮತ್ತು ಉಪಲೋಕಾಯ್ತ ಸ್ಥಾನಗಳಿಗೆ ಮತ್ತು ವಿಶೇಷವಾಗಿ ಲೋಕಾಯುಕ್ತದ ಅಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂದು ಹಿರೇಮಠ್ ಒತ್ತಾಯಿಸಿದರು.

ಭ್ರಷ್ಟಾಚಾರವನ್ನು ಕಿತ್ತೊಗೆಯುವುದಕ್ಕಾಗಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಸ್ತಿತ್ವದಲ್ಲಿದ್ದಾಗ ಭಾರತದ ಸಂವಿಧಾನದ ಪರಿಚ್ಛೇದ 162ರಡಿಯಲ್ಲಿನ ಅಧಿಕಾಋವನ್ನು ಚಲಾಯಿಸಿ ಕಾರ್ಯಾಂಗ ಆದೇಶ ಮೂಲಕ ಸಿದ್ದರಾಮಯ್ಯ ಸರ್ಕಾರ ಎಸಿಬಿ ಸ್ಥಾಪನೆಯನ್ನು ವಿಚಾರಣೆ ವೇಳೆ ಸಮರ್ಥಿಸಿಕೊಂಡಿದ್ದನ್ನು ಉಚ್ಛ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿದೆ. ಹಾಗಾಗಿ ಲೋಕಾಯುಕ್ತವನ್ನು ಬಲಪಡಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular