ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ 227 ದಿನಗಳಿಂದಲೂ ವಾಲ್ಮೀಕಿ ಸಂಸ್ಥಾನ ಮಠದ ಪ್ರಸನ್ನಾನಂದ ಸ್ವಾಮೀಜಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಬೇಡಿಕೆ ಈಡೇರಿಸದ ಸರ್ಕಾರ ಜನರ ಕಣ್ಣೊರೆಸಲು ಮಹರ್ಷಿ ವಾಲ್ಮೀಕಿ ಜಯಂತಿ ಮಾಡಲು ಹೊರಟಿರುವುದನ್ನು ಖಂಡಿಸಿ ತುಮಕೂರು ಜಿಲ್ಲಾ ವಾಲ್ಮೀಕಿ ಸಮುದಾಯದ ಮುಖಂಡರು ಶುಕ್ರವಾರ ಜಿಲ್ಲಾಡಳಿತ ಕರೆದಿದ್ದ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಸಭೆಯನ್ನು ಬಹಿಷ್ಕರಿಸಿ ಪರಿಶಿಷ್ಟ ಪಂಗಡದ ಪ್ರಮುಖರು ಅಸಮಾಧಾನ ಹೊರಹಾಕಿದರು. ಪೂರ್ವಭಾವಿ ಸಭೆ ಎಸ್.ಟಿ.ಸಮುದಾಯದ ಮುಖಂಡರನ್ನು ಆಹ್ವಾನಿಸಿರುವುದು ಸ್ವಾಗತಾರ್ಹ. ಆದರೆ ವಾಲ್ಮೀಕಿ ಸಮಾಜದ ಸ್ವಾಮೀಜಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಗೌರವಿಸದೆ ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ 227 ದಿನಗಳಿಂದ ವಾಲ್ಮೀಕ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸುವಂತೆ ಧರಣಿ ನಡೆಸುತ್ತಿದ್ದಾರೆ. ಇದಕ್ಕೆ ಕಿವಿಗೊಡದ ಸರ್ಕಾರ ವಾಲ್ಮೀಕಿ ಜಯಂತಿ ಆಚರಣೆಗೆ ಮಾಡುವ ಮೂಲಕ ಜನರ ಮೂಗಿಗೆ ತುಪ್ಪ ಸವರಲು ಹೊರಟಿದೆ ಎಂದು ಮುಖಂಡರು ಕಿಡಿಕಾರಿದರು.
ನಿಮಗೆ ನಿಜವಾಗಿಯೂ ಪರಿಶಿಷ್ಟ ಪಂಗಡದ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಧರಣಿನಿರತ ಶ್ರೀಗಳೊಂದಿಗೆ ಮಾತುಕತೆ ನಡೆಸಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು. ನಂತರ ವಾಲ್ಮೀಕಿ ಜಯಂತಿ ಮಾಡಲಿ. ಅದು ಬಿಟ್ಟು ಬೇಡಿಕೆ ಈಡೇರಿಸಲು ವಿಳಂಬ ಮಾಡುತ್ತಾ ವಾಲ್ಮೀಕಿ ಜಯಂತಿ ಮಾಡಲು ಸರ್ಕಾರಕ್ಕೆ ಯಾವ ನೈತಿಕತೆ ಇದೆ ಎಂದರು.
ಸಂವಿಧಾನಬದ್ದ ಹಕ್ಕಿಗಾಗಿ ಸ್ವಾಮೀಜಿ, ಮಳೆ, ಚಳಿಯನ್ನು ನಿರ್ಲಕ್ಷಿಸಿ ಹೋರಾಟ ನಡೆಸುತ್ತಾ ಅನಾರೋಗ್ಯಕ್ಕೆ ತುತ್ತಾಗಿರುವ ಸಂದರ್ಭದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವುದು ಎಷ್ಟು ಸರಿ. ಮೊದಲು ನಮ್ಮ ಬೇಡಿಕೆಗಳನ್ನು ಈಡೇರಿಸಿ ಸ್ವಾಮೀಜಿಯವರನ್ನು ಮಠಕ್ಕೆ ಮರಳಿಸಿ ಕೊಟ್ಟಾಗ ವಾಲ್ಮೀಕಿ ಜಯಂತಿ ಆಚರಿಸುವುದು ಒಳಿತು ಎಂದು ಹೇಳಿದರು.