Sunday, December 22, 2024
Google search engine
Homeಮುಖಪುಟಬಿಎಂಎಸ್ ಟ್ರಸ್ಟ್ ಅಕ್ರಮ - ಉನ್ನತಮಟ್ಟದ ತನಿಖೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಬಿಎಂಎಸ್ ಟ್ರಸ್ಟ್ ಅಕ್ರಮ – ಉನ್ನತಮಟ್ಟದ ತನಿಖೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಬಿಎಂಎಸ್ ಟ್ರಸ್ಟ್ ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್ ಮತ್ತು ಆ ಟ್ರಸ್ಟ್ ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ವಿಧಾನಸಭೇಯಲ್ಲಿ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ಇನ್ನು ನಾನು ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ ಎಂದು ಹೇಳಿದ್ದಾರೆ.

ಬಿಎಂಎಸ್ ಟ್ರಸ್ಟ್ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಕಾನೂನು ರೀತ್ಯಾ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಹೇಳಿದ್ದಾರೆ. ಕಾನೂನು ರೀತ್ಯ ಕ್ರಮ ಎಂದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ? ಎಂದು ಪ್ರಶ್ನಿಸಿದ್ದಾರೆ.

ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆ ಅಕ್ರಮಕ್ಕೆ ಕನ್ನಡಿ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲಾ ಸಕ್ರಮವಾಗಿದ್ದರೆ, ಇದಕ್ಕಿಂತ ದುರಂತ ಇನ್ನೊಂದಿಲ್ಲ. ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ನೋಡಿ. ಅಷ್ಟೂ ಆಸ್ತಿಯನ್ನು ಲಪಟಾಯಿಸಲು ಟ್ರಸ್ಟ್ ನಲ್ಲಿ ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ನೀವು ಹೇಗೆಲ್ಲಾ ಸಹಕಾರ ನೀಡಿದ್ದೀರಿ ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ತಿಳಿಸಿದ್ದಾರೆ.

ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಬ್ಲಾಕಿಂಗ್, ಪೇಮೆಂಟ್ ಸೀಟುಗಳನ್ನು 50:50 ರಂತೆ ಟ್ರಸ್ಟಿಗಳಿಬ್ಬರು ಹಂಚಿಕೊಂಡಿದ್ದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಕಾಮೆಡ್-ಕೆ ಆಕ್ಷೇಪಣಾ ಪತ್ರ, ಸರ್ಕಾರದ ಇಬ್ಬರು ಅಧಿಕಾರಿಗಳು ಟ್ರಸ್ಟಿನ ಅಕ್ರಮಗಳ ಬಗ್ಗೆ ಬರೆದ ಪತ್ರಗಳನ್ನು ನೀವು ಓದಲಿಲ್ಲವೇ ಸಚಿವರೇ? ಓದಲಿಲ್ಲ ಎಂದರೆ ಅದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

2018ರಲ್ಲಿ ನನ್ನ ನೇತೃತ್ವದ ಸರ್ಕಾರವು ದಾನಿ ಟ್ರಸ್ಟಿ, ಅಜೀವ ಟ್ರಸ್ಟಿ ನೇಮಕದ ಬಗ್ಗೆ ಬಿಎಂಎಸ್ ಟ್ರಸ್ಟಿನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳು ಅಕ್ರಮ ಎಂದು ಸಾರಿ, ಆ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ನನ್ನ ಸರ್ಕಾರ ಹೋದ ಮೇಲೆ ಬಂದ ರಾಜ್ಯ ಬಿಜೆಪಿ ಸರ್ಕಾರ ಈ ಅಕ್ರಮ ತಿದ್ದುಪಡಿಗಳನ್ನು ಶರವೇಗದಲ್ಲಿ ಪುರಸ್ಕರಿಸಿದ್ದು ಹೇಗೆ ಎಂದು ಕೇಳಿದ್ದಾರೆ.

ಡಾ.ಮಂಜುಳಾ ಮತ್ತು ಇನ್ನೋರ್ವ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಬರೆದ ಪತ್ರಗಳನ್ನು ಕಸದಬುಟ್ಟಿಗೆ ಹಾಕಿದ್ದು ಏಕೆ? ಇದರ ಹಿಂದಿನ ಹುನ್ನಾರ ಏನು ಉನ್ನತ ಶಿಕ್ಷಣ ಸಚಿವರೇ ವಾಗ್ದಾಳಿ ನಡೆಸಿದ್ದಾರೆ.

ಟ್ರಸ್ಟಿನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣೆಯನ್ನು ಒಮ್ಮೆ ಓದಿಕೊಳ್ಳಿ ಅಶ್ವತ್ಥನಾರಾಯಣ ಅವರೇ. ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular