ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲುಜಾರಿ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಗ್ರಾಮಾಂತರದ ಹೊಸಹಳ್ಳಿಯ ಗೌರಿ ಅಕ್ಷಯ ಜೆಲ್ಲಿ ಕ್ವಾರಿಯಲ್ಲಿ ನಡೆದಿದೆ. ಮಾಲಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಸಾವಿಗೆ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಮೃತ ಕಾರ್ಮಿಕನ ಹೆಸರು ಈರಣ್ಣ ಎಂದು ಗುರುತಿಸಲಾಗಿದ್ದು ಆತ ಕೊಳ್ಳೇಗಾಲ ತಾಲ್ಲೂಕಿನ ಬಿದರಹಳ್ಳಿ ಗ್ರಾಮದವನೆಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ಅದೇ ಕ್ವಾರಿಯಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದಾಗ ಮೃತಪಟ್ಟಿದ್ದು, ಇದು ಮಾಸುವ ಮುನ್ನವೇ ಮತ್ತೊಂದು ಸಾವು ಆಗಿದೆ.
ಹೊಸಹಳ್ಳಿಯ 16 ಎಕರೆ ಪ್ರದೇಶದಲ್ಲಿ ಗೌರಿ ಅಕ್ಷಯ ಕ್ವಾರಿ ಹರಡಿಕೊಂಡಿದೆ. ಕಾರ್ಮಿಕರು ಸೆಪ್ಟೆಂಬರ್ 22ರಂದು ಕ್ವಾರಿಯಲ್ಲಿ ಬಂಡೆಗೆ ರಂಧ್ರ ಕೊರೆದು ಸ್ಫೋಟಿಸುವ ಕೆಲಸದಲ್ಲಿ ನಿರತರಾಗಿದ್ದರು. ಆಗ ಕಾರ್ಮಿಕ ಈರಣ್ಣ ಸುರಕ್ಷತಾ ಕ್ರಮಗಳಿಲ್ಲದೆ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕ್ವಾರಿಯ ಬಹುತೇಕ ಪ್ರದೇಶ ಕಡಿದಾದ ಬಂಡೆಗಲ್ಲಿನ ಗುಡ್ಡವಾಗಿದೆ. ಕಾರ್ಮಿಕರು ಹಗ್ಗ ಕಟ್ಟಿಕೊಂಡು ಕಡಿದಾದ ಬೆಟ್ಟಹತ್ತಿ ಬಂಡೆಗೆ ರಂಧ್ರ ಕೊರೆದು ಸ್ಪೋಟಿಸುತ್ತಿದ್ದರು. ಹೀಗೆ ಬಂಡೆಗೆ ರಂಧ್ರ ಕೊರೆಯುವಾಗ ಕಾರ್ಮಿಕ ಈ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕ್ವಾರಿಯಲ್ಲಿ ಬಂಡೆಗೆ ರಂಧ್ರ ಕೊರೆಯುವ ವೇಳೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಈರಣ್ಣ ಬಲಿಯಾಗಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.