ಪತಿಯ ಮರಣದ ನಂತರ ಆತನ ಪತ್ನಿ ದಲಿತಳೆಂಬ ಕಾರಣಕ್ಕೆ ಪತಿಯ ಕುಟುಂಬದವರು ಮನೆಗೆ ಬಿಟ್ಟುಕೊಳ್ಳದೇ ಬಹಿಷ್ಕಾರ ಹಾಕಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಂಜುಳಾ ಪತಿ ಜಿತೇಂದ್ರನ ಇಟ್ಟುಕೊಂಡಿದ್ದ ಡೈರಿ ಸಿಕ್ಕಿದ್ದು ಅದರಲ್ಲಿ ಪೊಲೀಸರು, ಸ್ವಾಮಿಗಳು ಮತ್ತು ರಾಜಕಾರಣಿಗಳು ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ತುಮಕೂರಿನ ವಿದ್ಯಾನಗರದಲ್ಲಿರುವ ಶ್ರೀಶೈಲ ಆಗ್ರೋ ರೈಸ್ ಮಿಲ್ ಮಾಲಿಕ ದಿ.ಕೃಷ್ಣಪ್ಪ ಅವರ ಸೊಸೆ ಮಂಜುಳಾ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಮನೆಗೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ಪತಿಯ ಮನೆಯ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇದಕ್ಕೆ ದಲಿತ ಸಂಘಟನೆಗಳು ಬೆಂಬಲ ನೀಡಿವೆ.
ಈ ಪ್ರಕರಣದ ಸಂಬಂಧ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿರುವ ಮಂಜುಳಾ ತಾಯಿ ಅನ್ನಪೂರ್ಣಮ್ಮ ಈ ಪ್ರಕರಣದಲ್ಲಿ ದೊಡ್ಡದೊಡ್ಡ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಭಾವಿ ಸಚಿವರೊಬ್ಬರು, ಸ್ವಾಮೀಜಿಗಳು, ಪೊಲೀಸರು ಭಾಗಿಯಾಗಿದ್ದಾರೆ ಎಂದು ಮಂಜುಳಾ ತಾಯಿ ಅನ್ನಪೂರ್ಣಮ್ಮ ಹೇಳಿಕೆಯನ್ನು ಉಲ್ಲೇಖಿಸಿ ವಿಜಯವಾರ್ತೆ.ಕಾಮ್ ವರದಿ ಮಾಡಿದೆ.
ನಮಗೆ ಜಿತೇಂದ್ರನ ಡೈರಿ ಸಿಕ್ಕಿದ್ದು, ಹಲವು ಮಾಹಿತಿಗಳು ದೊರೆತಿವೆ. ಸಂಬಂಧಿಕರೊಬ್ಬರು ಕೋಟಿ ಕೋಟಿ ಬೇನಾಮಿ ಆಸ್ತಿಯನ್ನು ಹೊಂದಿರುವುದು ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಈ ಆಸ್ತಿಯ ಹಿಂದೆ ಪ್ರಭಾವಿ ಸ್ವಾಮೀಜಿಯೊಬ್ಬರು ಭಾಗಿಯಾಗಿದ್ದು ಈ ಬೇನಾಮಿ ಆಸ್ತಿಯನ್ನು ಜಿತೇಂದ್ರನ ಹೆಸರಲ್ಲಿ ಇಟ್ಟಿದ್ದಾರೆ. ಜಿತೇಂದ್ರ ಸ್ಮಗ್ಲಿಂಗ್ ದಂಧೆಯಲ್ಲೂ ತೊಡಗಿದ್ದ ಎಂಬುದು ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಈ ಡೈರಿಯನ್ನು ನಮ್ಮ ವಕೀಲರಿಗೆ ಕೊಟ್ಟಿದ್ದೇವೆ ಎಂದು ಮಂಜುಳಾ ತಾಯಿ ಅನ್ನಪೂರ್ಣಮ್ಮ ಹೇಳಿದ್ದಾರೆ..