Sunday, December 22, 2024
Google search engine
Homeಮುಖಪುಟಸರ್ಕಾರದಿಂದ ಮಾದಿಗರ ಕಡೆಗಣನೆ - ಬಿಜೆಪಿ ಮುಖಂಡ ವೈ.ಎಚ್.ಹುಚ್ಚಯ್ಯ, ಮಾಜಿ ಶಾಸಕ ಗಂಗಹನುಮಯ್ಯ ಆಕ್ರೋಶ

ಸರ್ಕಾರದಿಂದ ಮಾದಿಗರ ಕಡೆಗಣನೆ – ಬಿಜೆಪಿ ಮುಖಂಡ ವೈ.ಎಚ್.ಹುಚ್ಚಯ್ಯ, ಮಾಜಿ ಶಾಸಕ ಗಂಗಹನುಮಯ್ಯ ಆಕ್ರೋಶ

ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕಾದ ಆಳುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಎಲ್ಲಾ ಕ್ಷೇತ್ರಗಳಲ್ಲೂ ಮಾದಿಗರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಗಂಗಹನುಮಯ್ಯ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಉಭಯ ಮುಖಂಡರು, ತುಮಕೂರು ಜಿಲ್ಲೆಯಲ್ಲಿ ಸುಮಾರು 5.5 ಲಕ್ಷ ಮಂದಿ ಮಾದಿಗ ಸಮುದಾಯವಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 30-50 ಸಾವಿರದವರೆಗೆ ಮತದಾರರು ಇದ್ದಾರೆ. ಆದರೂ ಈ ಸಮುದಾಯಕ್ಕೆ ನ್ಯಾಯಯುತ ಸ್ಥಾನಮಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ದೂರಿದರು.

ಚುನಾವಣಾ ಸಮಯದಲ್ಲಿ ಪಕ್ಷದಲ್ಲಿರುವ ನಮ್ಮ ಸಮುದಾಯದ ನಾಯಕರನ್ನು ನಂಬಿಸಿ ಜನಾಂಗದ ಮತದಾರರನ್ನು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವಂತೆ ಪ್ರೇರೇಪಿಸಿ ನಂತರ ಈ ಸಮುದಾಯದ ನಾಯಕರನ್ನು ನಿರ್ಲಕ್ಷಿಸುವುದು, ತೇಜೋವಧೆ ಮಾಡುವುದು ಯಾವುದೇ ರಾಜಕೀಯ ಸ್ಥಾನಮಾನ ಸಿಗದಂತೆ ನೋಡಿಕೊಳ್ಳುವುದು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ಮೀಸಲು ಕ್ಷೇತ್ರಗಳಾದ ಕೊರಟಗೆರೆ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಿ ಪಕ್ಷ ಸಂಘಟನೆ ಮಾಡಲು ಸಹಕಾರ ನೀಡುತ್ತಿಲ್ಲ. ನಮ್ಮನ್ನು ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿದ್ದು ನಾಯಕತ್ವ ಗಟ್ಟಿಗೊಳ್ಳದಂತೆ ಹಾಗೂ ಕ್ಷೇತ್ರದಲ್ಲಿ ನಾಯಕತ್ವ ಬೇರು ಬಿಡದಂತೆ ನೋಡಿಕೊಳ್ಳುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದರು.

ಮೀಸಲು ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಎದುರಾಳಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಪರೋಕ್ಷವಾಗಿ ಅನುಕೂಲ ಮಾಡಿಕೊಟ್ಟು ಹೊಂದಾಣಿಕೆ ರಾಜಕೀಯ ಮಾಡಲಾಗುತ್ತಿದೆ. ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಬದಲಿಸಿ ಕ್ಷೇತ್ರದ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಿ ಟಿಕೇಟ್ ಗಾಗಿ ಮ್ಯಾಚ್ ಫಿಕ್ಸಿಂಗ ಮಾಡಿ ಪಾರ್ಟ್ ಟೈಂ ರಾಜಕಾರಣಿಗಳಿಗೆ ಪಕ್ಷದ ಟಿಕೇಟ್ ನೀಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಪಕ್ಷದಲ್ಲಿ ಇರುವ ಮಾದಿಗ ಸಮುದಾಯದ ನಾಯಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು. ಕೊರಟಗೆರೆ ಮತ್ತು ಪಾವಗಡ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷ ಸಂಘಟನೆ ಮಾಡುತ್ತ ಬಂದಿರುವ ಹಿರಿಯ ಮುಖಂಡರನ್ನು ಪರಿಗಣಿಸಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular