ತುಮಕೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸುರಿಯುತ್ತಿರುವ ಬಾರಿ ಮಲೆಗೆ ಕೆರೆಕಟ್ಟೆಗಳು ತುಂಬಿ ಕೋಡಿ ಒಡೆದು ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದ್ದು, ಒಂದು ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆ ಯಥೇಚ್ಛವಾಗಿ ಬಿದ್ದು ಶೇ.76ರಷ್ಟು ಬೆಳೆ ನಾಶವಾಗಿದೆ ರಾಗಿ, ಕಡಲೆಕಾಯಿ, ತರಕಾರಿ, ಹಣ್ಣು, ಅಡಿಕೆ, ತೆಂಗು, ಪಪ್ಪಾಯಿ, ದಾಳಿಂಬೆ ಬೆಳೆಗಳು ನಾಶವಾಗಿದೆ. ಈ ಬಗ್ಗೆ ಸರ್ಕಾರ ಕಾಟಾಚಾರದ ಸಮೀಕ್ಷೆ ನಡೆಸಿ, 1 ಸಾವಿರ, 2 ಸಾವಿರ ಪರಿಹಾರ ನೀಡುತ್ತಿದೆ. ಇದು ರೈತರಿಗೆ ಮಾಡಿದ ಅವಮಾನ. ಹೀಗಾಗಿ ಒಂದು ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮನೆ ಕಳೆದುಕೊಂಡ ವಾರಸುದಾರರಿಗೆ ತಲಾ ಐದು ಲಕ್ಷ ರೂಪಾಯಿ, ಮಳೆಯಿಂದ ಜೀವಹಾನಿಯಾದ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾಋ ನೀಡಬೇಕು ಎಂದು ಕೇಳಿದರು.
ಜಿಲ್ಲೆಯ ಶೇ.99ರಷ್ಟು ಕೆರೆಗಳು ತುಂಬಿ ಅಪಾಯದ ಅಂಚಿನಲ್ಲಿವೆ. ಗುಬ್ಬಿಯ ಅಡುಗೂರು ಕೆರೆ ಸೇರಿ ನೂರಾರು ಕೆರೆಗಳು ಬಿರುಕು ಬಿಟ್ಟಿವೆ. ಹಾಗಾಗಿ ಸರ್ಕಾರ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಒತ್ತುವರಿಯಾಗಿರುವ ಕೆರೆಗಳ ತೆರವು, ರಾಜಗಾಲುವೆಗಳ ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಒನ್ ನೇಷನ್ ಒನ್ ಗ್ರೀಡ್ ಹೆಸರಿನಲ್ಲಿ ವಿದ್ಯುತ್ ಇಲಾಖೆಯ ಮೇಲೆ ಸರ್ಕಾರ ಸಾವಿರಾರು ಕೋಟಿ ರೂಗಳ ಬಂಡವಾಳ ಹೂಡಿಕೆ ಮಾಡಿದೆ. ಕರ್ನಾಟಕ ಒಂದರಲ್ಲಿಯೇ ಸುಮಾರು 20 ಲಕ್ಷ ಕೋಟಿ ಬಂಡವಾಳ ಹೂಡಲಾಗಿದೆ. ಇದೆಲ್ಲಾ ಜನರು ನೀಡಿದ ತೆರಿಗೆ ಹಣ. ಕೇಂದ್ರ ಸರ್ಕಾರ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮುಂದಿನ ಅಧಿವೇಶನದಲ್ಲಿ ವಿದ್ಯುತ್ ಖಾಸಗೀಕರಣ ಬಿಲ್ ಮಂಡನೆ ಮಾಡಲು ಮುಂದಾಗಿದೆ. ಇದು ಮಂಡನೆಯಾದ ವಿದ್ಯುತ್ ಬಿಲ್ 2-3 ಪಟ್ಟು ಹೆಚ್ಚಾಗಲಿದೆ. ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.