Friday, October 18, 2024
Google search engine
Homeಮುಖಪುಟಹಿಂದೀ ಹೇರಿಕೆಯ ಬಲಿಪಶುಗಳು ನಾವು ಮಾತ್ರವೇ?

ಹಿಂದೀ ಹೇರಿಕೆಯ ಬಲಿಪಶುಗಳು ನಾವು ಮಾತ್ರವೇ?

ರಹಮತ್ ತರೀಕೆರೆ

ಅದು ಸೋನಪ್ರಯಾಗದಿಂದ ಕೇದಾರಕ್ಕೆ ಚಾರಣ. ೧೫ ಕಿಮೀ ಫಾಸಲೆ. ಕಡಿದಾದ ಪರ್ವತ. ಆಮೆನಡಿಗೆಯಲ್ಲಿ ಒಂದಿಡೀ ಹಗಲುಬೇಕು. ನನಗೆ ಉತ್ತರ ಭಾರತದ ನಾನಾ ಪ್ರಾಂತ್ಯದ ಗ್ರಾಮೀಣ ಯಾತ್ರಿಕರ ಜತೆ ನಡೆಯುವ ಅಪೂರ್ವ ಅವಕಾಶ ಸಿಕ್ಕಿತು. ಜನ ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು. ಹಿಂದಿಯಲ್ಲಿ ಓದು‌-ಮಾತು ವೈನಾಗಿ ಬಲ್ಲ ನನಗದು ಅರ್ಥವಾಗುತ್ತಿರಲಿಲ್ಲ.

ನೀವಾಡುತ್ತಿರುವ ಭಾಷೆ ಯಾವುದು ಎಂದರೆ ಬುಂದೇಲಿ, ಬ್ರಜ, ಘಡವಾಲಿ, ಭೋಜಪುರಿ, ಡೋಗ್ರಿ, ಪಹಾಡಿ, ಮೇವಾರಿ,ಕುಮ್ವಾನಿ, ಮಘಾಯಿ, ಹರಿಯಾಣ್ವಿ ರಾಜಸ್ಥಾನಿ ಎನ್ನುತ್ತಿದ್ದರು. ರಾಜಸ್ಥಾನಿ ಎನ್ನುವುದು ಕೂಡ ಏಕರೂಪಿಯಲ್ಲ ಎಂದು ಅರಿವಾಗಿದ್ದು ಬಿಕನೀರಿನ ಮುಖ್ತಿಯಾರಲಿ ಹಾಡುವಾಗ. ಹಿಂದೂಸ್ತಾನಿ ಸಂಗೀತದ ಬಹುತೇಕ ಚೀಸುಗಳು ಈ ಜನಭಾಷೆಗಳಲ್ಲಿವೆ. ಮೇಘಾಲಯಕ್ಕೆ ಹೋದಾಗಲೇ ಖಾಸಿ ಭಾಷೆಯಲ್ಲಿ ದಿನಪತ್ರಿಕೆಗಳು ಸೈತ ಹೊರಡುತ್ತವೆ ಎಂದು ನನಗೆ ಅರಿವಾಗಿದ್ದು: ತ್ರಿಪುರ ಪ್ರವಾಸವು ಅಲ್ಲಿನ ಜನಭಾಷೆ ಮತ್ತು ಆಡಳಿತ ಭಾಷೆ ಕೊಕ್ ಬರೋಕ್ ಎಂದು ಮನದಟ್ಟು ಮಾಡಿತು.

ಹಿಂದಿಯಲ್ಲಿ ತಡವರಿಸುತ್ತಿದ್ದ ಒಬ್ಬ ಗ್ರಾಮಪಂಚಾಯಿತಿ ಅಧ್ಯಕ್ಷೆ, ಕೋಕ್ ಬರೋಕದಲ್ಲಿ ತನ್ನ ಸಾಧನೆಯನ್ನು ಕುರಿತು ಮಾಡಿದ ಅದ್ಭುತ ಭಾಷಣ ನೆನಪಾಗುತ್ತಿದೆ. ಜನಭಾಷೆ ಎಂದರೆ ನಮ್ಮ ಅಂತರಂಗದ ಭಾವನೆಯನ್ನು ಶಕ್ತವಾಗಿ ಹೇಳುವ ಮಾಧ್ಯಮ ಮಾತ್ರವಲ್ಲ, ಅದು ನಮ್ಮತನವನ್ನು ನಾವೇ ಕಂಡುಕೊಳ್ಳುವ ಲೋಕದೃಷ್ಟಿ ಕೂಡ.

ಅದರೆ ಹಿಂದಿ `ರಾಷ್ಟ್ರಭಾಷೆ’ ಎಂಬ ಅಪಗ್ರಹಿಕೆಯನ್ನು ಇಡೀ ಭಾರತದ ಮೇಲೆ ಹಿಂದಿನಿಂದಲೂ ಒಕ್ಕೂಟ ಸರ್ಕಾರಗಳು ನಾನಾ ಬಗೆಯಲ್ಲಿ ಹೇರುತ್ತ ಬಂದಿವೆ. ಈಗ ಈ ಗ್ರಹಿಕೆಗೆ ರಾಷ್ಟ್ರೀಯತೆ ಹೆಸರಲ್ಲಿ ಬ್ರಾಹ್ಮಣವಾದಿ ಮತೀಯತೆಯ ಅಂಚನ್ನೂ ಕಟ್ಟಲಾಗಿದೆ. ಈ ತಪ್ಪುಗ್ರಹಿಕೆ ಮತ್ತು ವ್ಯವಸ್ಥಿತ ಹೇರಿಕೆಗಳ ನಿಜವಾದ ಬಪಶುಗಳು ದಕ್ಷಿಣದ ದ್ರಾವಿಡ ಕುಟುಂಬದ ಭಾಷೆಗಳು ಮಾತ್ರವಲ್ಲ. ಉತ್ತರ ಭಾರತದ ನೂರಾರು ಜನಭಾಷೆಗಳು ಕೂಡ. ಭಾರತದ ಬಹುತ್ವವು ಅದರ ಹಲವು ಧರ್ಮ ಸಂಸ್ಕೃತಿ ಪ್ರಾಂತ್ಯಗಳಲ್ಲಿ ಮಾತ್ರವಲ್ಲ, ಅದರ ಸಹಸ್ರಾರು ( ದಿಟ, ಅಕ್ಷರಶಃ ಸಹಸ್ರಾರು) ಜನನುಡಿಗಳಲ್ಲೂ ಇದೆ.

ಇದೇ ನಮ್ಮ ದೇಶದ ಚೆಲುವು. ಒಕ್ಕಟ್ಟಿನ ರಹಸ್ಯ. ಇದನ್ನು ಮರೆತು ಅಥವಾ ತಿರಸ್ಕರಿಸಿ ಯಾವುದೊ ಒಂದು ನುಡಿಯನ್ನು ಹೇರಿದರೆ, ಅದರ ಮೂಲಕ ಮತೀಯ ರಾಷ್ಟ್ರವಾದವನ್ನು ಬೆರೆಸಿದರೆ, ಭಾರತ ಒಡೆದ ಮನೆಯಾಗುವ ಅಪಾಯವಿದೆ. ಇದನ್ನು ಕುವೆಂಪು ಅವರಂತಹ ಸಾಂಸ್ಕೃತಿಕ ಎಚ್ಚರದ ಲೇಖಕ ಸದಾ ಹೇಳುತ್ತಿದ್ದರು. ಜಿ.ಎನ್. ದೇವಿಯವರು ಈ ಬಗ್ಗೆ ಭಾರತದ ಜನಭಾಷೆಗಳ ಅಧ್ಯಯನದಲ್ಲಿ ಹೊಸ ನೋಟಗಳನ್ನು ಕೊಟ್ಟಿದ್ದಾರೆ.

ಭಾರತದ ಎಲ್ಲ ಜನನುಡಿಗಳು ತಮಗೆ ತಕ್ಕ ಮಾನ್ಯತೆ -ಘನತೆ ಪಡೆಯುವ ತನಕ, ಕುವೆಂಪು ಗಾಂಧಿ ಲೋಹಿಯಾ ಪೆರಿಯಾರ್ ಹೇಳಿದ ಈ ಮಾತನ್ನು ನಾವು ಪಡಿನುಡಿಯುತ್ತಲೇ ಇರಬೇಕಿದೆ.

(ಲೇಖಕರು, ವಿಮರ್ಶಕರು, ಸಂಶೋಧನಾಕಾರರು)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular