ಗೋವಾದ ಎಂಟು ಮಂದಿ ಕಾಂಗ್ರೆಸ್ ಶಾಸಕರು ಮಂಗಳವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಏಳು ಮಂದಿ ಶಾಸಕರ ಸಮ್ಮುಖದಲ್ಲಿ ಪ್ರತಿಪಕ್ಷದ ನಾಯಕ ಮೈಕೆಲ್ ಲೋಬೊ ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ ದಿಗಂಬರ್ ಕಾಮತ್ ಅನುಮೋದಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ವೈರ್.ಕಾಮ್ ವರದಿ ಮಾಡಿದೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸದಾನಂದ ಶೇಟ್ ತನವಡೆ ಅವರು ಎಂಟು ಕಾಂಗ್ರೆಸ್ ಶಾಸಕರು ಅಡಳಿತ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಿದ್ದರು.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 11 ಶಾಸಕರನ್ನು ಹೊಂದಿತ್ತು. ಪಕ್ಷಾಂತರದ ನಂತರ ಕಾಂಗ್ರೆಸ್ ಶಾಸಕರ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ. ಆದರೆ ಬಿಜೆಪಿಯ ಸಂಖ್ಯೆ 33ಕ್ಕೆ ಏರಿದೆ.
ಗೋವ ವಿಧಾನಸಭೆಯಲ್ಲಿ ಬಿಜೆಪಿ ಕೇವಲ 20 ಸ್ಥಾನಗಳನ್ನು ಗೆದ್ದಿದೆ. ಆದರೆ ಇಬ್ಬರು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಶಾಸಕರು ಪಕ್ಷಾಂತರ ಮಾಡಿದ್ದಾಋಎ ಮತ್ತು ಮೂವರು ಸ್ವತಂತ್ರ ಶಾಸಕರು ಸಹ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ದಿಗಂಬರ್ ಕಾಮತ್, ಮೈಕಲ್ ಲೊಬೊ, ಅವರ ಪತ್ನಿ ದೆಲಿಲಾ ಲೊಬೊ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ತಮ್ಮ ನಿಷ್ಠೆಯನ್ನು ಬದಲಾಯಿಸಿದ ಶಾಸಕರಲ್ಲಿ ಸೇರಿದ್ದಾರೆ.
ನವ ಭಾರತವನ್ನು ಸೃಷ್ಟಿಸಲು ಮತ್ತು ಗೋವಾದ ಅಭಿವೃದ್ಧಿಗಾಗಿ ಪ್ರಧಾನ ನರೇಮದ್ರ ಮೋದಿ ಅವರ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶಾಸಕರು ಬಿಜೆಪಿಗೆ ಸೇರಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ನಿರ್ಧಾರವು ಸಂದರ್ಭಗಳನ್ನು ಆಧರಿಸಿದೆ. ನನ್ನನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡದಿದ್ದಾಗ ಆರಂಭದಲ್ಲಿ ಹೇಳಿದ್ದೆ. ಕಾಂಗ್ರೆಸ್ ನಲ್ಲಿ ನಡೆಯುತ್ತಿರುವುದು ಸರಿಯಲ್ಲ. ಪತ್ರವನ್ನು ಓದಿದರೆ ಅದು ಕಾಂಗ್ರೆಸ್ ಜೋಡೋದ ಬಗ್ಗೆಯೇ ಹೊರತು ಭಾರತ್ ಜೋಡೋ ಅಲ್ಲ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮಾಡಿದ ಕೆಲಸಗಳು ಭಾರತದ ನಾಘರಿಕರಿಗೆ ಅಂತಾರಾಷ್ಟ್ರಿಯ ಗೌರವನ್ನು ಗಳಿಸಿದೆ. ಮಾರ್ಗೋವಾದಲ್ಲಿ ನನ್ನ ಕಾರ್ಯಕರ್ತರು ಪಕ್ಷವು ಏನನ್ನೂ ಮಾಡುತ್ತಿಲ್ಲ ಎಂದು ಹೇಳಿದರು. ಅದಕ್ಕಾಗಿ ನಾವು ಗೋವಾದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.