ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆಯ ನೆಪದಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಮತ್ತು ಜೆಡಿಎಸ್ ಕಾರ್ಯಕರ್ತರು ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಿಂದಿ ಭಾಷೆ ರಾಷ್ಟ್ರಭಾಷೆಯಲ್ಲ. ಅದು ಕನ್ನಡದಂತೆಯೇ ಒಂದು ಭಾಷೆ. ಆದರೆ ಕೇಂದ್ರ ಸರ್ಕಾರ ಹಿಂದಿ ದಿವಸ ಆಚರಿಸುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೂ ಬೆಂಬಲ ನೀಡುತ್ತಿದೆ. ಈ ಮೂಲಕ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಹಿಂದಿನ ಹೇರುವುದನ್ನು ನಿಲ್ಲಿಸಬೇಕು. ಕನ್ನಡ ಭಾಷೆ, ನೆಲ, ಜಲ ನಾಡು ನುಡಿಗೆ ಗೌರವ ಕೊಡಬೇಕು. ಅದು ಬಿಟ್ಟು ರಾಜ್ಯ ಸರ್ಕಾರ ಕೇಂದ್ರದ ಕ್ರಮವನ್ನು ಖಂಡಿಸದೆ ಬೆಂಬಲ ನೀಡುತ್ತಿರುವು ಖಂಡನೀಯ ಎಂದು ಹೇಳಿದರು.
ಹಿಂದಿ ಹೇರುವುದನ್ನು ವಿರೋಧಿಸುವ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದಿ ದಿವಸ ಆಚರಣೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಕನ್ನಡ ಭಾಷೆಗೆ ಅಗೌರವ ತೋರಿಸಿದ್ದಾರೆ. ಮುಖ್ಯಮಂತ್ರಿಗಳು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಟಿ.ಎ.ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಹಿಂದಿ ದಿವಸ ಆಚರಣೆಯ ಮೂಲಕ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಇದನ್ನು ಕನ್ನಡಿಗರು ಮತ್ತು ಇಲ್ಲಿನ ಸಾಮಾನ್ಯ ಜನರು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಭಾಷೆಗೆ ಗೌರವ ನೀಡಬೇಕಿತ್ತು. ಭಾಷೆಗೆ ಒತ್ತು ನೀಡಬೇಕಿತ್ತು. ಆದರೆ ನಮ್ಮ ಭಾಷೆಯನ್ನು ನಿರ್ಲಕ್ಷಿಸಿ ಹಿಂದಿ ದಿವಸ ಆಚರಣೆಗೆ ಮಾನ್ಯತೆ ನೀಡುತ್ತಿರುವುದು ಶೋಚನೀಯ ಸಂಗತಿ ಎಂದು ಟೀಕಿಸಿದರು.