Monday, September 16, 2024
Google search engine
Homeಮುಖಪುಟಮುರುಘಾ ಮಠದ ಶಿವಮೂರ್ತಿ ಶರಣರ ಅತ್ಯಾಚಾರ ಪ್ರಕರಣ - ಸಮಗ್ರ ಮತ್ತು ಸಂಪೂರ್ಣ ತನಿಖೆಗೆ ಆಗ್ರಹ

ಮುರುಘಾ ಮಠದ ಶಿವಮೂರ್ತಿ ಶರಣರ ಅತ್ಯಾಚಾರ ಪ್ರಕರಣ – ಸಮಗ್ರ ಮತ್ತು ಸಂಪೂರ್ಣ ತನಿಖೆಗೆ ಆಗ್ರಹ

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಂಪೂರ್ಣ ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿ ಹಾಗೂ ವಿಚಾರಣೆ ನ್ಯಾಯಯುತವಾಗಿ ನಡೆಸಲು ಪ್ರಕರಣವನ್ನು ಹೈಕೋರ್ಟ್ ಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಸಂಘರ್ಷ ಸಮಿತಿ – ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವಸತಿ ನಿಲಯದ ಅಪ್ರಾಪ್ತ ಹೆಣ್ಣು ಮಕ್ಕಳನ್ನು ನಿರಂತರವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಪ್ರಕರಣವು ಶರಣ ಮತ್ತು ಬಸವ ಸಂಸ್ಕೃತಿಗೆ ಅತ್ಯಂತ ಅಪಮಾನವಾಗಿದೆ. ನಾಗರಿಕ ಸಮಾಜವನ್ನು ಆಘಾತಕ್ಕೀಡು ಮಾಡಿದೆ. ಆರೋಪಿತರ ಮೇಲೆ ಫೋಕ್ಸ್ ಮತ್ತು ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ ಕಾಯ್ದೆಗಳನ್ನು ಹಾಕಲಾಗಿದ್ದರೂ ಬಂಧಿಸಲು ವಿಳಂಬ ಮಾಡಿದರು. ಇದು ಸರ್ಕಾರಿ ವ್ಯವಸ್ಥೆಯ ಲೋಪವಾಗಿದೆ ಎಂದು ಸಂಘಟನೆಯ ಮುಖಂಡರು ದೂರಿದರು.

ಆರೋಪಿ ಪ್ರತಿಷ್ಠಿತ ಮತ್ತು ಪ್ರಭಾವಶಾಲಿ ಆಗಿರುವುದರಿಂದ ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಪೀಠಾಧಿಕಾರಿ ಮತ್ತಿತರರ ತನಿಖೆ ನ್ಯಾಯಾಲಯದ ಮೂಲಕ ನಡೆಯಬೇಕು. ಇದಕ್ಕಾಗಿ ಪ್ರತ್ಯೇಕ ವಿಶೇಷ ತನಿಖಾ ಸಮಿತಿ ರಚಿಸಬೇಕು. ಪ್ರಕರಣವನ್ನು ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಆರೋಪಿಗಳು ಪ್ರಭಾವಿಗಳಾಗಿರುವುದರಿಂದ ಉಚ್ಚ ನ್ಯಾಯಾಲಯವು ತಕ್ಷಣವೇ ಮಧ್ಯ ಪ್ರವೇಶಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮುತುವರ್ಜಿಯಿಂದ ತನಿಖೆ ಮತ್ತು ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಚಾರಣೆ ಮತ್ತು ನ್ಯಾಯದಾನ ಪ್ರಕ್ರಿಯೆ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಮುಗಿಯುವಂತೆ ಕ್ರಮ ವಹಿಸಸಬೇಕು. ಎಲ್ಲಾ ಸಂತ್ರಸ್ತ ಬಾಲೆಯರು ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು ತಕ್ಷಣದ ಪರಿಹಾರ ಒದಗಿಸಬೇಕು. ಜೊತೆಗೆ ಅವರಿಗೆ ನಿರಂತರ ತಜ್ಞ ಆಪ್ತಸಲಹೆಯ ಅವಶ್ಯಕತೆಯನ್ನು ಪೂರೈಸಬೇಕು ಆಗ್ರಹಿಸಿದರು.

ಈ ಪ್ರಕರಣವನ್ನು ಬೆಳಕಿಗೆ ತಂದು ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳಿಗೆ ನ್ಯಾಯ ಒದಗಿಸಲು ಮುಂದಾದ ಒಡನಾಡಿ ಸಂಸ್ಥೆಯ ಪದಾಧಿಕಾರಿಗಳಿಗೆ ಹೆಚ್ಚು ಬೆದರಿಕೆ ಕರೆಗಳು ಬರುತ್ತಿರುವುದರಿಂದ ಅವರಿಗೆ ಸೂಕ್ತ ಮತ್ತು ಉನ್ನತ ಮಟ್ಟದ ಭದ್ರತೆ ಒದಗಿಸಬೇಕು.

ಸಂತ್ರಸ್ತ ಬಾಲೆಯರ ಗೌಪ್ಯತೆಯನ್ನು ಕಾಪಾಡುವುದು, ಎಲ್ಲಾ ಮಾಧ್ಯಮಗಳ ಕಾನೂನಾತ್ಮಕ ಜವಾಬ್ದಾರಿ. ಆದರೆ ಈಗಾಗಲೇ ಕೆಲ ದೃಶ್ಯ ಮಾಧ್ಯಮಗಳು ಅದನ್ನು ಸಣ್ಣ ಪ್ರಮಾಣದಲ್ಲಿ ಉಲ್ಲಂಘಿಸಲು ಪ್ರಯತ್ನಿಸಿವೆ. ಹಾಗಾಗಿ ತಕ್ಷಣವೇ ಈ ಸಂಬಂಧ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮಧ್ಯಮಗಳಿಗೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.

ಆರೋಪಿಗಳು ತುಂಬಾ ಪ್ರಭಾವಿಗಳಾಗಿದ್ದು ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳು ಆರೋಪಿಗಳಿಗೆ ಬೆಂಬಲಿಗರಾಗಿರುವುದರಿಂದ ತನಿಖೆಯ ಮೇಲೆ ಪ್ರಭಾವ ಬೀರದಂತೆ ತಡೆಯಲು ತನಿಖೆ ಪೂರ್ಣಗೊಳ್ಳುವವರೆಗೂ ಆರೋಪಿಗಳಿಗೆ ಜಾಮೀನು ಸಿಗದಂತೆ ಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular