ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಗೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ವೆಂಕಟಾಪುರ ಸಮೀಪದಲ್ಲಿ ನಿರ್ಮಿಸಿರುವ ಸೇತುವೆಯ ಮೇಲೆ ಮಣಿಮುಕ್ತಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ವೆಂಕಟಾಪುರ ಗ್ರಾಮ ದ್ವೀಪದಂತಾಗಿದ್ದು ಜನರು ಯಾವ ಕಡೆಗೂ ಹೋಗಲು ಸಾಧ್ಯವಾಗುತ್ತಿಲ್ಲ.
ವೆಂಕಟಾಪುರದ ಸಂತೆಮಾರುಕಟ್ಟೆ ಸಮೀಪ ಮತ್ತು ಒಂದು ಕಿಲೋ ಮೀಟರ್ ದೂರದಲ್ಲಿ ಹರಿಯುತ್ತಿರುವ ಮಣಿಮುಕ್ತಾವತಿ ನದಿ ಉಕ್ಕಿ ಹರಿಯುತ್ತಿದ್ದು ಕಳೆದ 15 ದಿನಗಳಿಂದಲೂ ಗ್ರಾಮದ ಜನರು ಬೇರೆ ಕಡೆಗೆ ಹೋಗಿಬರಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ವೆಂಕಟಾಪುರದ ಮೂಲಕ ಹಿಂದೂಪುರ, ದೇವನಹಳ್ಳಿ ಮತ್ತು ಬೆಂಗಳೂರಿಗೆ ಹೋಗಲು ಮುಖ್ಯ ರಸ್ತೆ ಇದ್ದು ಮಣಿಮುಕ್ತಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಬೆಂಗಳೂರು ಕಡೆಗೂ ಹೋಗಲು ಆಗುತ್ತಿಲ್ಲ. ಇನ್ನೊಂದು ಕಡೆ ಗ್ರಾಮದ ಸಂತೆ ಮಾರುಕಟ್ಟೆಯ ಬಳಿಯೂ ಹಳ್ಳ ಹರಿಯುತ್ತಿದ್ದು ಪಾವಗಡಕ್ಕೂ ಹೋಗಲು ಆಗುತ್ತಿಲ್ಲ. ಹೀಗಾಗಿ ಕಳೆದ 15 ದಿನಗಳಿಂದ ಬಸ್ ಸಂಚಾರವಿಲ್ಲ. ಜನರು ಬೇರೆ ಕಡೆಗೆ ಹೋಗಲು ಆಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಳೆ ಬೀಳುತ್ತಿರುವ ಪರಿಣಾಮ ಗ್ರಾಮದ ಎರಡೂ ಕಡೆಯೂ ಇರುವ ದೊಡ್ಡ ಹಳ್ಳಗಳು ಹರಿಯುತ್ತಿರುವುದರಿಂದ ರಸ್ತೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪರಿಣಾಮ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆಯಾಗಿದೆ. ವೆಂಕಟಾಪುರ ಗ್ರಾಮದಲ್ಲಿ ದ್ವೀಪದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ ಅಳಲು ತೋಡಿಕೊಂಡಿದ್ದಾರೆ.
ವೆಂಕಟಾಪುರ ಗ್ರಾಮ ಜನ ಸಂಪರ್ಕ ಕಡಿತಗೊಂಡಿದೆ. ಇಲ್ಲಿ ಸೇತುವೆ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕಿವಿಗೆ ಹಾಕಿಕೊಂಡಿಲ್ಲ. ಒಮ್ಮೆ ಸೇತುವೆ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಿ ಕೈಬಿಟ್ಟಿದ್ದಾರೆ. ಹೀಗಾಗಿ ಪ್ರತಿ ವರ್ಷ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಇರುತ್ತದೆ ಎಂದು ಹೇಳಿದ್ದಾರೆ.
ಮಳೆ ಬಂದು ಹಳ್ಳಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಕೆಲವು ಯುವಕರು ದ್ವಿಚಕ್ರವಾಹನದಲ್ಲಿ ಸಾಹಸ ಮಾಡಿ ಓಡಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.