ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಸೇರಿದಂತೆ ನಾಡಿನಾದ್ಯಂತ ವಿಪರೀತಿ ಪಳೆಯಿಂದ ಪ್ರವಾಹ ಉಂಟಾಗಿ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ರೈತರು ಬಿತ್ತನ ಮಾಡಿದ ಬೀಜಗಳು ಮಣ್ಣಿನ ಜೊತೆಯಲ್ಲಿ ಕೊಚ್ಚಿ ಹೋಗಿದೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿಜವಾದ ಜನರ ಸಂಕಷ್ಟಗಳನ್ನು ಮರೆತು ಜನೋತ್ಸವದಂತಹ ಚುನಾವಣಾ ಕಾರ್ಯಕ್ರಮದಲ್ಲಿ ನಿರತವಾಗಿರುವುದನ್ನು ಖಂಡಿಸುತ್ತದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಸಿ ಜ್ಞಾನ ಸಿಂಧು ಸ್ವಾಮಿ ಹೇಳಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರುನಾಡು ಕಟ್ಟೋಣ ಕನ್ನಡ ನಾಡಿನ ಪ್ರಣಾಳಿಕೆ ಕುರಿತು ಸಂವಾದ ಕಾರ್ಯಕ್ರಮವನ್ನು ತುರುವೇಕೆರೆ ಯಾದ್ಯಂತ ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದು, ಜನರು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಜನರ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ನ್ಯಾಯಕೊಡಿಸಲು ಪಕ್ಷ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಪರಿಸರ ನಾಶದ ಜೊತೆಗೆ ಜನರ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಲ್ಲಿನ ಅಡಳಿತ ವರ್ಗ ಮತ್ತು ಸ್ಥಳಿಯ ಜನ ಪ್ರತಿನಿಧಿಗಳು ಅಕ್ರಮ ಗಣಿಗಾರಿಕೆಯಲ್ಲಿ ಶಾಮಿಲಾಗಿರುವುದು ದುರಂತ. ಇಂತಹ ಅಕ್ರಮ ಕಲ್ಲುಗಣಿಗಾರಿಕೆ ನಿಷೇಧಿಸಬೇಕು. ಜೀವವೈವಿಧ್ಯತೆಯ ನಾಶಕ್ಕೆ ಕಾರಣವಾಗಿರುವ ಕಂಪನಿಗಳ ವಿರುಧ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದರು.
ತಾಲ್ಲೂಕಿನ ಅಡಳಿತ ಕಚೇರಿ ಮತ್ತು ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ವಿಪರೀತವಾಗಿದೆ. ರೈತರ ಪಹಣಿ ಬದಲಾವಣೆ, ಹೆಸರು ಬದಲಾವಣೆ, ಫೋಡಿ ಮಾಡಿಸಿಕೊಳ್ಳಲು ತಾಲ್ಲೂಕು ಕಛೇರಿ, ಕಂದಾಯ ಇಲಾಖೆ, ನಾಡ ಕಚೇರಿ ಮತ್ತು ನ್ಯಾಯಾಲಯಗಳಿಗೆ ಅಲೆಯುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.