ಇಂಧನ ಸಚಿವ ಸುನೀಲ್ ಕುಮಾರ್ ಅವರು ನಮ್ಮ ಸರ್ಕಾರದ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಹಾಗೂ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಕೇಂದ್ರದ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಲು ಮುಂದಿನ ಅಧಿವೇಶನದಲ್ಲಿ ನಿರ್ಣಯ ಮಂಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸುನಿಲ್ ಕುಮಾರ್ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಹುನ್ನಾರು ನಡೆದಿತ್ತು. ರಾಜ್ಯದ ಮೇಲ ಮತ್ತು ಇಂಧನ ಇಲಾಖೆ ಮೇಲೆ ಸಾಲ ಹೊರಿಸಿದ್ದರು. ಸೋಲಾರ್ ವಿದ್ಯುತ್ ಅನ್ನು ಅವಾಸ್ತವಿಕ ಮೊತ್ತಕ್ಕೆ ಖರೀದಿಸಿದ್ದರು. ಆದರೆ ಈಗ ಸೌರ ವಿದ್ಯುತ್ ಮಾರಾಟದಿಂದ ರಾಜ್ಯಕ್ಕೆ ಲಾಭ ಬಂದಿದೆ. ತಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದಿದ್ದಾರೆ. ಈ ಹೇಳಿಕೆ ಕೊಟ್ಟ ಮೇಲೆ ಸರ್ಕಾರ ಶ್ವೇತಪತ್ರ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ರೈತರ ಪಂಪುಸೆಟ್ಸುಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಮಾಡಿದ್ದರು ಅಂದರೆ ಏನು ಅರ್ಥ? ಅಳವಡಿಸಿದ್ದೆವು ಎಂದೋ? ಎಲ್ಲಿ ಅಳವಡಿಸಿದ್ದೇವೆ? ಮೀಟರ್ ಅಳವಡಿಸಲು ಟೆಂಡರ್ ಕರೆದಿದ್ದೇವಾ? ಯಾವ ಕಂಪನಿಗೆ ಆದೇಶ ಕೊಟ್ಟಿದ್ದೆವು? ನಮ್ಮ ಸರ್ಕಾರ ಮೀಟರ್ ಅಳವಡಿಸಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದರೆ ಅದರ ಪ್ರತಿಗಳೆಲ್ಲಿವೆ? ಯಾವ ರೈತರಿಗೆ ತೊಂದರೆ ಕೊಟ್ಟಿದ್ದೇವೆ? ಈ ಎಲ್ಲಾ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಮೋದಿ ಸರ್ಕಾರ ಹೊಸ ವಿದ್ಯುತ್ ಕಾಯ್ದೆಯನ್ನು ಜಾರಿಗೊಳಿಸಲು ರೈತರ ಪಂಪುಸೆಟ್ಟುಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆಸುತ್ತಿದೆ ಹೊಸ ವಿದ್ಯುತ್ ಬಿಲ್ ಅನ್ನು ಈಗಾಗಲೇ ಪಾರ್ಲಿಮೆಂಟಿನಲ್ಲಿ ಮಂಡಿಸಿದೆ. ಕರಾಳ ಕೊರೊನದ ಕರ್ಪ್ಯೂ ಇದ್ದಾಗಲೇ ಕರಡನ್ನು ಸಿದ್ದಪಡಿಸಿ ನೆಪ ಮಾತ್ರಕ್ಕೆ ಚರ್ಚೆಗೆ ಬಿಟ್ಟಂತೆ ಮಾಡಿದ್ದರು. ನಮ್ಮ ಸರ್ಕಾರ ಇದ್ದಾಗ ಈ ರೀತಿಯ ರೈತ ದ್ರೋಹದ ಕಾನೂನನ್ನು ಜಾರಿಗೆ ತಂದಿದ್ದರೆ ಅದರ ದಾಖಲೆ ಬಿಡುಗಡೆ ಮಾಡಲಿ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ತರಲು ಹೊರಟಿರುವ ವಿದ್ಯುತ್ ಬಿಲ್ ನ ವಿರುದ್ಧ ಮುಂದಿನ ಅಧಿವೇಶನದಲ್ಲಿ ನೀವೇ ನಿರ್ಣಯವನ್ಉ ಮಂಡಿಸಿ ನೀವು ತರುವ ನಿರ್ಣಯದ ಪರವಾಗಿ ನಾವೆಲ್ಲರೂ ಒಮ್ಮತದಿಂದ ಒಪ್ಪಿಗೆ ಸೂಚಿಸುತ್ತೇವೆ. ಯಾವ ಕಾರಣಕ್ಕೂ ಕರ್ನಾಟಕದ ರೈತರ ಮೇಲೆ ಹಾಗೂ ಜನಸಾಮಾನ್ಯರ ಮೇಲೆ ಈ ಕರಾಳ ಕಾನೂನನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲವೆಂದು ಒಮ್ಮತದ ನಿರ್ಣಯವನ್ನು ಅಂಗೀಕರಿಸಿ ಕಳಿಸೋಣ ಎಂದಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲ ಇತ್ತು. ಮುಖ್ಯಮಂತ್ರಿ ಹುದ್ಎಯ ಜೊತೆಗೆ ಹಣಕಾಸಿನ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ನಾನು ಈ ಸಾಲವನ್ನು ಹೀಗೇ ಬಿಟ್ಟರೆ ವಿದ್ಯುತ್ ಇಲಾಖೆಯು ಮುಳುಗಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಎಸ್ಕಾಂಗಳ ಬಾಕಿಗಳನ್ನು ತೀರಿಸಲು ಸಾಲ ಮಾಡಿದ್ದೆವು. ಅಗತ್ಯ ಇರುವ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನು ನಷ್ಟ ಎನ್ನುವುದಿಲ್ಲ. ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ.
ಸುಮಾರು ವರ್ಷಗಳಿಂದ ರಾಜ್ಯ ಸರ್ಕಾರದ ಇಲಾಖೆಗಳು ವಿದ್ಯುತ್ ಇಲಾಖೆಗೆ ಪಾವತಿಸದೆ ಉಳಿಸಿಕೊಂಡಿದ್ದ ಬಾಕಿಗಳನ್ನು ತೀರಿಸಿ ಅವುಗಳ ಹೊರೆ ಕಡಿಮೆ ಮಾಡಿದ್ದನ್ನು ಸುನಿಲ್ ಕುಮಾರ್ ಅವರು ನಷ್ಟಕ್ಕೆ ತಂದರು ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ರಾಜಕೀಯಕ್ಕಾಗಿ ಹೇಳುತ್ತಿರುವ ಸುಳ್ಳು ಎಂದು ಟೀಕಿಸಿದ್ದಾರೆ.
15 ವರ್ಷಗಳಿಂದ ಏನೇನಾಗಿದೆ ಎಂಬುದರ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕೆಂದು ಮತ್ತೊಮ್ಮೆ ಒತ್ತಾಯಿಸುತ್ತೇನೆ.