Wednesday, September 18, 2024
Google search engine
Homeಚಳುವಳಿಕೃಷಿ ಕಾಯ್ದೆಗಳ ವಾಪಸ್ ಗೆ ಒತ್ತಾಯಿಸಿ ಸೆ.12ರಂದು ವಿಧಾನಸೌಧ ಮುತ್ತಿಗೆ - ರೈತ ಸಂಘ ಎಚ್ಚರಿಕೆ

ಕೃಷಿ ಕಾಯ್ದೆಗಳ ವಾಪಸ್ ಗೆ ಒತ್ತಾಯಿಸಿ ಸೆ.12ರಂದು ವಿಧಾನಸೌಧ ಮುತ್ತಿಗೆ – ರೈತ ಸಂಘ ಎಚ್ಚರಿಕೆ

ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳ ವಾಪಸ್ ಗೆ ಆಗ್ರಹಿಸಿ ವಿದ್ಯುತ್ ಖಾಸಗಿ ಬಿಲ್ ಜಾರಿ ಮಾಡದಂತೆ ಒತ್ತಾಯಿಸಿ ಸೆಪ್ಟಂಬರ್ 12 ರಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಕೃಷಿ ಕಾಯ್ದೆಗಳ ವಾಪಸ್ ಪಡೆದಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಸಬೂಬು ಹೇಳುವ ಮೂಲಕ ದಿನಗಳನ್ನು ದೂಡುತ್ತಿದೆ. ಹಾಗಾಗಿ ಸೆಪ್ಟಂಬರ್ 12 ರಿಂದ ಆರಂಭವಾಗುವ ಅಧಿವೇಶನದ ಸಂದರ್ಭದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು.

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲ ಇಲ್ಲವಾಗಿದ್ದು ಬಿಜೆಪಿ ರಾಜಕೀಯವಾಗಿ ಹೆಚ್ಚು ಅನುಕೂಲ ಪಡೆದುಕೊಳ್ಳುತ್ತಿದೆ. ಕರ್ನಾಟಕವನ್ನು ತಮ್ಮ ಕಾರ್ಯಕ್ರಮಗಳ ಪ್ರಯೋಗಶಾಲೆಯಾಗಿ ಮಾಡಿಕೊಂಡು, ರಾಜ್ಯದ ರೈತರು, ಕಾರ್ಮಿಕರು, ಬಡವರು, ಕೃಷಿಕೂಲಿಕಾರರು ಪರದಾಡುವಂತಹ ಸ್ಥಿತಿ ನಿರ್ಮಾಣ ಮಾಡಿದೆ. ಸಾರ್ವಜನಿಕ ಉದ್ಯಿಮೆಗಳನ್ನು ಖಾಸಗೀಕರಣ ಮಾಡಿ, ಯುವಜನರು ಉದ್ಯೋಗಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿ ಸೃಷ್ಟಿಸಿದೆ ಎಂದು ದೂರಿದರು.

ರಾಜ್ಯದ ಸಣ್ಣ-ಪುಟ್ಟ ಹಿಡುವಳಿದಾರರು ಕೃಷಿ ಜೊತೆಗೆ ಹೈನುಗಾರಿಕೆ ಮಾಡಿಕೊಂಡು, ಜೀವನ ಸಾಗಿಸುತ್ತಿದ್ದು ಅವರನ್ನು ಹೈನುಗಾರಿಕೆಯಿಂದ ಹೊರಗಿಡುವ ಹುನ್ನಾರ ನಡೆಸುತ್ತಿದೆ. ಸಬ್ಸಿಡಿ ಹೆಸರಿನಲ್ಲಿ 2-3 ಸಾವಿರ ಹಸು ಸಾಕಲು ದೊಡ್ಡ ದೊಡ್ಡ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟು, 2-3 ಹಸುಗಳನ್ನು ಕಟ್ಟಿಕೊಂಡು ಹೈನುಗಾರಿಕೆಯಲ್ಲಿ ಜೀವನ ನಡಸುತ್ತಿದ್ದ ಬಡವರ ಹೊಟ್ಟೆಯ ಮೇಲೆ ಹೊಡೆಯಲು ಮುಂದಾಗಿದೆ ಎಂದು ಟೀಕಿಸಿದರು.

ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಉದ್ದಿಮೆಗಳು, ರಸ್ತೆ, ರೈಲ್ವೆ, ವಿಮಾನ ಇನ್ನಿತರ ಸೇವೆಗಳನ್ನು ಖಾಸಗೀಕರಣ ಮಾಡಿ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಬಲಾಡ್ಯರಿಗೆ ಶಕ್ತಿ ತುಂಬಿ, ಬಡವರನ್ನು ಮತ್ತಷ್ಟು ಮೃತ್ಯಕೂಪಕ್ಕ ತಳ್ಳುವ ಪ್ರಕ್ರಿಯೆಯಲ್ಲಿದೆ ಎಂದರು.

ಇದೆಲ್ಲವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೆಪ್ಟಂಬರ್ 12 ರ ವಿಧಾನಸೌಧ ಮುತ್ತಿಗೆ ಹಮ್ಮಿಕೊಂಡಿದ್ದು 20 ಸಾವಿರ ರೈತರು ಭಾಗವಹಿಸುವರು. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರಗೆ ಮೆರವಣಿಗೆ ನಡೆಯಲಿದೆ.

ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾಧ್ಯಕ್ಷ ಆನಂದಪಟೇಲ್, ಧನಂಜಯ ಆರಾಧ್ಯ, ಬಸ್ತಿಹಳ್ಳಿ ರಾಜಣ್ಣ, ಅನಿಲ್, ಕೊರಟಗೆರೆ ಸಿದ್ದರಾಜು, ನಾಗೇಂದ್ರ, ನಾಗಣ್ಣ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular