ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಚಲವಾದಿ ನಾರಾಯಣಸ್ವಾಮಿ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ತುಮಕೂರಿನಲ್ಲಿಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪ್ರೊ.ಬರಗೂರು ರಾಮಚಂದ್ರಪ್ಪನವರು ಭರತನಗರಿ ಕಾದಂಬರಿಯಲ್ಲಿ ರಾಷ್ಟ್ರಗೀತೆ ಮತ್ತು ಗಂಗಾ ಮತಸ್ಥರ ದೇವತೆ ಗಂಗಾ ಮಾತೆಗೆ ಅಪಮಾನ ಮಾಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಪ್ರೊ. ಬರಗೂರು ರಾಮಚಂದ್ರಪ್ಪನವರು ಪತ್ರಿಕೆಗಳ ಮೂಲ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ದೂರನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಪ್ರೊ.ಬರಗೂರರು ನಮ್ಮ ನಾಡು ಕಂಡ ಸಾಂಸ್ಕೃತಿಕ ಅನನ್ಯತೆಯನ್ನು ಪಡೆದ ಪ್ರಸಿದ್ದ ಲೇಖಕರು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆಗೂ ಬರಗೂರು ಪಾತ್ರರಾದವರು. ಜೊತೆಗೆ ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು ವ್ಯಕ್ತಿತ್ವವುಳ್ಳ ಪ್ರಜಾಪ್ರತಿಭೆಯ ಮೇಲೆ ಕೊಟ್ಟಿರುವ ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಹೇಳಿದ್ದಾರೆ.
ಪ್ರೊ.ಬರಗೂರು ರಾಮಚಂದ್ರಪ್ಪನವರು ಭರತನಗರಿ ಕಾದಂಬರಿಯನ್ನು ನಾಲ್ಕು ದಶಕಗಳ ಹಿಂದೆ ಬರೆದಿದ್ದರು. ಅದೊಂದು ರಾಜಕೀಯ ವಿಡಂಬನೆಯ ರೂಪಾತ್ಮಕ ಕಾದಂಬರಿ. ಸೃಜನಶೀಲ ಕೃತಿಗಳನ್ನು ಕೇವಲ ವಾಚ್ಯಾರ್ಥದಲ್ಲಿ ನೋಡಲಾಗದು ಎಂದು ತಿಳಿಸಿದ್ದಾರೆ.
ಈ ಕಾದಂಬರಿಯಲ್ಲಿ ಅನೇಕ ಮನೋಧರ್ಮದ ಅನೇಕ ನಡವಳಿಕೆಯ ಪಾತ್ರಗಳು ಬರುತ್ತವೆ. ಲೇಖಕರು ಆಯಾ ಪಾತ್ರದ ಮನೋಧರ್ಮಕ್ಕೆ ಅನುಗುಣವಾದ ಮಾತುಗಳನ್ನು ಬರೆಯಬೇಕಾಗುತ್ತದೆ. ಅಂತೆಯೇ ಈ ಕಾದಂಬರಿಯ ಒಂದು ಪಾತ್ರವು ರಾಷ್ಟ್ರಗೀತೆಯ ದಾಟಿಯಲ್ಲಿ ದೇಶದ ಸ್ಥಿತಯನ್ನು ವಿಡಂಬಿಸುತ್ತದೆ. ಆದರೆ ರಾಷ್ಟ್ರಗೀತೆಯ ಆಶಯವನ್ನು ಎಲ್ಲಿಯೂ ವಿರೋಧಿಸುವುದಿಲ್ಲ. ವಿಡಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರೊ.ಬರಗೂರರು ಈಗಾಗಲೇ ಬಹಿರಂಗ ಸ್ಪಷ್ಟನೆ ನೀಡಿದ್ದು, ಅಂಥ ಯಾವ ಉದ್ದೇಶವೂ ತನಗಿಲ್ಲವೆಂದೂ ಜನರಿಗೆ ತಪ್ಪು ಭಾವನೆ ಉಂಟು ಮಾಡಿದ್ದರೆ ವಿಷಾದಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಹೇಳಿದರು.
ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ನರಸೀಯಪ್ಪ, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅರುಣ್, ಸಂಶೋಧನಾ ವಿದ್ಯಾರ್ಥಿ ನವೀನ್, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ ಶಿವಣ್ಣ, ಬಿಎಸ್.ಪಿ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ವಕೀಲ ಪಾವಗಡ ಶ್ರೀರಾಮ್, ದಲಿತ ಮುಖಂಡ ಬಿ.ಜಿ.ಸಾಗರ್, ಗೋವಿಂದಪ್ಪ ಮೊದಲಾದವರು ಉಪಸ್ಥಿತರಿದ್ದರು.