ದಿನೇಶ್ ಅಮೀನ್ ಮಟ್ಟು
ಇಂದು ಗಣೇಶನ ಹಬ್ಬ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಧರ್ಮದ ಪ್ರವೇಶಕ್ಕೆ ಕಾರಣವಾದ ಸಾರ್ವಜನಿಕ ಗಣೇಶೋತ್ಸವದ ರೂವಾರಿ ಬಾಲಗಂಗಾಧರ ತಿಲಕ್. ಈ ಹಿನ್ನೆಲೆಯಲ್ಲಿ ನೋಡುವುದಾದರೆ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಧರ್ಮ ಕೋಮುವಾದ ರೂಪ ಪಡೆದು ಎರಡೂ ಕ್ಷೇತ್ರಗಳು ದಾರಿ ತಪ್ಪಿರುವುದಕ್ಕೆ ತಿಲಕ್ ಅವರೇ ಹೊಣೆಗಾರರಾಗುತ್ತಾರೆ.
ತನ್ನದೊಂದು ತೀರ್ಮಾನ ಭವಿಷ್ಯದಲ್ಲಿ ಇಂತಹದ್ದೊಂದು ಅನಾಹುತಕ್ಕೆ ದಾರಿ ಮಾಡಿಕೊಡಬಹುದು ಎಂದು ಬಾಲಗಂಗಾಧರ ತಿಲಕ್ ಇಲ್ಲವೇ ಅವರ ತೀರ್ಮಾನವನ್ನು ಬೆಂಬಲಿಸಿದ್ದ ಮಹಾತ್ಮ ಗಾಂಧಿ ಊಹಿಸಿದ್ದರೇ? ಕೋಮುವಾದದ ಬೆಂಕಿಯನ್ನು ಆರಿಸುತ್ತಲೇ ಅದಕ್ಕೆ ಬಲಿಯಾದ ಗಾಂಧೀಜಿಯವರು ಇಂತಹದ್ದೊಂದು ಊಹೆ ಮಾಡಿದ್ದರೆಂದು ಅನಿಸುವುದಿಲ್ಲ. ಆದರೆ ತಿಲಕ್?
ಕಾಂಗ್ರೆಸ್ ಪಕ್ಷದೊಳಗೆ ಲಾಲ ಲಜಪತ್ ರಾಯ್ ಮತ್ತು ಬಿಪಿನ್ ಚಂದ್ರಪಾಲ್ ಜೊತೆಗೆ ಉಗ್ರ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಿದ್ದ ಬಾಲ ಗಂಗಾಧರ್ ತಿಲಕ್ ಗುಂಪು ಮತ್ತು ಹಿಂದೂ-ಮುಸ್ಲೀಮ್ ಐಕ್ಯತೆ ಮತ್ತು ಸುಧಾರವಣಾವಾದಿ ಚಿಂತನೆಗಳನ್ನು ಪ್ರತಿನಿಧಿಸುತ್ತಿದ್ದ ಗೋಪಾಲಕೃಷ್ಣ ಗೋಖಲೆ ನೇತೃತ್ವದ ಗುಂಪಿನ ನಡುವಿನ ಸೈದ್ಧಾಂತಿಕ ಸಂಘರ್ಷ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಭಾಗವಾಗಿದೆ. ವಿ.ಡಿ.ಸಾವರ್ಕರ್, ಬಿ.ಎಸ್.ಮೂಂಜೆ ಮತ್ತು ಬಾಲಗಂಗಾಧರ ತಿಲಕ್ ಅವರನ್ನು ಆರ್.ಎಸ್.ಎಸ್ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೆವಾರ್ ತಮ್ಮ ಗುರುಗಳೆಂದು ಪರಿಗಣಿಸಿದ್ದರು.
ತಿಲಕ್ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಅವರು ಪ್ರಾರಂಭಿಸಿದ್ದ ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ನಡೆದಷ್ಟು ಚರ್ಚೆ ಅವರ ಸಾಮಾಜಿಕ ಮತ್ತು ಧಾರ್ಮಿಕ ನಿಲುವುಗಳ ಬಗ್ಗೆ ನಡೆದಿಲ್ಲ.
ವರ್ಣಾಶ್ರಮ ವ್ಯವಸ್ಥೆಯ ಪ್ರಬಲ ಪ್ರತಿಪಾದಕರಾಗಿದ್ದ ತಿಲಕ್ ತಾನು ಸಾಯುವ ಎರಡು ವರ್ಷ ಮೊದಲು ಕೂಡಾ ಅಸ್ಪೃಶ್ಯತೆಯನ್ನು ವಿರೋಧಿಸುವ ಅರ್ಜಿಗೆ ಸಹಿ ಹಾಕಲು ನಿರಾಕರಿಸಿದವರು. ಅಂತರ್ಜಾತಿ ವಿವಾಹವನ್ನು ಅದರಲ್ಲೂ ಮೇಲ್ಜಾತಿ ಮತ್ತು ಕೆಳಜಾತಿಯ ಗಂಡು ಹೆಣ್ಣಿನ ವಿವಾಹವನ್ನು ತಿಲಕ್ ವಿರೋಧಿಸಿದ್ದರು. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ್ದ ಸಾಹು ಮಹಾರಾಜ್ ವಿರುದ್ಧವೇ ತಿಲಕ್ ಸಂಘರ್ಷಕ್ಕಿಳಿದಿದ್ದರು. ತಿಲಕ್ ಅವರ ಶಿಷ್ಯನೊಬ್ಬ ಸಾಹು ಮಹಾರಾಜ್ ಅತ್ಯಾಚಾರಕ್ಕೆ ಯತ್ನಿಸಿದ್ದರೆಂದು ಬ್ರಾಹ್ಮಣ ಮಹಿಳೆಯಿಂದ ಸುಳ್ಳು ದೂರು ಕೂಡಾ ಕೊಡಿಸಿದ್ದ.
(ಇಂಹತ ಬಾಲಗಂಗಾಧರ ತಿಲಕ್ ಅವರ ಮಗ ಶ್ರೀಧರ್ ನಾಯಕ್, ಬಾಬಾಸಾಹೇಬ್ ಅಂಬೇಡ್ಕರ್ ಅನುಯಾಯಿಯಾಗಿ ಅಸ್ಪೃಶ್ಯತೆ ವಿರುದ್ದ ಹೋರಾಟ ನಡೆಸಿದ್ದರು. ಶ್ರೀಧರ್ ಅವರ ಮಗ ಜಯಂತ್ ರಾವ್ ತಿಲಕ್ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗಿದ್ದರು.)
ತಿಲಕ್ ಅವರು ಕಟ್ಟರ್ ಪಂಥೀಯ ಮಹಿಳಾ ವಿರೋಧಿಯಾಗಿದ್ದರು. ಇವರ ಮಹಿಳಾ ವಿರೋಧಿ ಧೋರಣೆಗೆ ಬ್ರಿಟಿಷ್ ಆಡಳಿತದ ಮೊದಲ ಮಹಿಳಾ ವೈದ್ಯೆ ರುಕ್ಮಾದೇವಿ ಬದುಕು ಸಾಕ್ಷಿ. ತನ್ನ ಇಚ್ಚೆಗೆ ವಿರುದ್ಧವಾಗಿ ನಡೆದಿದ್ದ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದ ರುಕ್ಮಾದೇವಿಗೆ ಸ್ಥಳೀಯ ನ್ಯಾಯಾಲಯ ಗಂಡನ ಮನೆಗೆ ಹೋಗಬೇಕು ಇಲ್ಲದಿದ್ದರೆ ಆರು ತಿಂಗಳು ಜೈಲುವಾಸದ ಶಿಕ್ಷೆ ಅನುಭವಿಸಲೇಬೇಕು ಎಂದು ತೀರ್ಪು ನೀಡಿದಾಗ ಹಿಂದೂ ಧರ್ಮಶಾಸ್ತ್ರವನ್ನು ಉಲ್ಲೇಖಿಸಿ ಬಾಲ್ಯವಿವಾಹವನ್ನು ಸಮರ್ಥಿಸಿದವರು ಬಾಲ ಗಂಗಾಧರ್ ತಿಲಿಕ್.
ಕೊನೆಗೆ ಬ್ರಿಟಿಷ್ ರಾಣಿ ವಿಕ್ಟೋರಿಯ ಮಧ್ಯಪ್ರವೇಶ ಮಾಡಿ ರುಕ್ಮಾದೇವಿ ಆಕೆಯ ವಿವಾಹವನ್ನು ರದ್ದುಗೊಳಿಸಿದ್ದರು. ರಕ್ಮಾದೇವಿ ತನ್ನ ಶಿಕ್ಷಣ ಮುಂದುವರಿಸಿ ಲಂಡನ್ ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಭಾರತಕ್ಕೆ ಹಿಂದಿರುಗಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಾರೆ (101 ರಿಪೋರ್ಟರ್ ನೀಡುವ ರುಕ್ಮಾದೇವಿ ಫೆಲೋಷಿಪ್ ಅನ್ನು ಕಳೆದ ವರ್ಷ ನನ್ನ ಮಗಳು ಪಡೆದಿದ್ದಳು).
ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು ಹತ್ತರಿಂದ ಹನ್ನೆರಡನೇ ವರ್ಷಕ್ಕೆ ಹೆಚ್ಚಿಸಿದಾಗಲೂ ವಿರೋಧಿಸಿದವರು ಬಾಲಗಂಗಾಧರ ತಿಲಕ್. ಹೆಣ್ಣು ಮಕ್ಕಳು ಉದ್ಯೋಗ ಸೇರುವುದನ್ನು ಕೂಡ ಅವರು ವಿರೋಧಿಸಿದ್ದರು.
ಒಬ್ಬ ಸ್ತ್ರೀ ವಿರೋಧಿ ಆಳದಲ್ಲಿ ಕೋಮುವಾದಿಯಾಗಿರುತ್ತಾನೆ ಮತ್ತು ಒಬ್ಬ ಕೋಮುವಾದಿ ಆಳದಲ್ಲಿ ಸ್ತ್ರೀ ವಿರೋಧಿಯೂ ವಿಕೃತನೂ ಆಗಿರುತ್ತಾನೆ. ಇತ್ತೀಚಿನ ಉದಾಹರಣೆ ಬೇಕಿದ್ದರೆ ಚಿತ್ರದುರ್ಗದವರನ್ನು ಕೇಳಿ, ಸ್ವಲ್ಪ ಹಳೆಯ ಉದಾಹರಣೆ ಬೇಕಿದ್ದರೆ ಹೊಸದುರ್ಗದವರನ್ನು ಕೇಳಿ.
ಗೌರಿ-ಗಣೇಶನ ಹಬ್ಬವನ್ನು ಆಚರಿಸುವ ಹೆಣ್ಣು ಮಕ್ಕಳ ಪೂಜೆ ಗೌರಿ ಗಣೇಶನಿಗಷ್ಟೇ ಇರಲಿ. ಪಕ್ಕದಲ್ಲಿ ಯಾರಾದರೂ ಹುಲುಮಾನವರ ಪೋಟೋ ಇಟ್ಟಿದ್ದರೆ ಅವರಿಗೆ ಪೂಜೆ ಮಾಡುವ ಮೊದಲು ಅವರ ಬಗ್ಗೆ ತಿಳಿದುಕೊಳ್ಳಿ.
ಲೇಖಕರು ಹಿರಿಯ ಪತ್ರಕರ್ತರು, ಮಾಜಿ ಮಾಧ್ಯಮ ಸಲಹೆಗಾರರು