ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕೆಯ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಓರ್ವ ಯುವಕನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಭಟ್ಕಳ ಮತ್ತು ತುಮಕೂರಿನ ಮೇಲೆ ಏಕಕಾಲದಲ್ಲೇ ದಾಳಿ ನಡೆಸಿರುವ ಎನ್.ಐಎ ಅಧಿಕಾರಿಗಳು ಭಟ್ಕಳದಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತುಮಕೂರಿನ ಮರಳೂರು ದಿಣ್ಣೆಯಲ್ಲಿ ವಾಸವಾಗಿದ್ದ ವ್ಯಕ್ತಿಯ ಮನೆ ಮೇಲೆ ಭಾನುವಾರ ಮುಂಜಾನೆಯೇ ದಾಳಿ ನಡೆಸಿ ಓರ್ವನನ್ನು ಬಂಧಿಸಲಾಗಿದೆ.
ದೆಹಲಿ ಮತ್ತು ಬೆಂಗಳೂರು ಮೂಲದ ಎನ್.ಐಎ ಅಧಿಕಾರಿಗಳ ತಂಡ ದಾಳಿ ಮಾಡಿದೆ. ತುಮಕೂರು ಎಚ್.ಎಂ.ಎಸ್ ಯುನಾನಿ ಕಾಲೇಜಿನಲ್ಲಿ ಈ ಯುವಕ ಯುನಾನಿ ಅಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ತುಮಕೂರಿನಲ್ಲಿ ಬಂಧಿಸಿರುವ ಯುವಕ ಮಹಾರಾಷ್ಟ್ರ ಮೂಲದ ಮೆಡಿಕಲ್ ವಿದ್ಯಾರ್ಥಿ ಎಂದು ಹೇಳಲಾಗಿದ್ದು, ಯುನಾನಿ ಕಾಲೇಜಿನ ಮೇಲೆಯೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಎಚ್.ಎಂ.ಎಸ್ ಯುನಾನಿ ಕಾಲೇಜನ್ನು ಹತ್ತು ವರ್ಷಗಳ ಹಿಂದೆಯೇ ಬೇರೆಯವರಿಗೆ ಮಾರಾಟ ಮಾಡಲಾಗಿತ್ತು. ಹೀಗಾಗಿ ಬೇರೊಂದು ಆಡಳಿತ ಮಂಡಳಿ ಎಚ್.ಎಂ.ಎಸ್. ಯುನಾನಿ ಕಾಲೇಜನ್ನು ನಡೆಸಿಕೊಂಡು ಬರುತ್ತಿತ್ತು ಎಂದು ತಿಳಿದುಬಂದಿದೆ.