ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಮುಂಬೈನ ಚಾಲ್ ಮರು ಅಭಿವೃದ್ಧಿಯಲ್ಲಿನ ಅಕ್ರಮಗಳು ಮತ್ತು ಅವರ ಪತ್ನಿ ಮತ್ತು ಸಹವರ್ತಿಗಳನ್ನು ಒಳಗೊಂಡಿರುವ ಸಂಬಂಧಿತ ವಹಿವಾಟುಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವುತ್ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು.
ಪ್ರಕರಣಕ್ಕೆ ಸಂಬಂದಿಸಿದಂತೆ ಜುಲೈ 1ರಂದು ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮುಂಬೈನ ಏಜೆನ್ಸಿಯ ಮುಂದೆ ಹಾಜರಾಗಿದ್ದರು.
ಆದರ ನಂತರ ಇಡಿ ಅವರಿಗೆ ಎರಡು ಬಾರಿ ಸಮನ್ಸ್ ನೀಡಿತ್ತು. ಆದರೆ ಅವರು ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಇಡಿ ಕಚೇರಿಗೆ ಹೋಗಲು ಸಮನ್ಸ್ ಗಳನ್ನು ತಪ್ಪಿಸಿದ್ದರು.
ಭಾನುವಾರ ಬೆಳಗ್ಗೆ 7 ಗಂಟೆಗೆ ಇಡಿ ಅಧಿಕಾರಿಗಳು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯೊಂದಿಗೆ ಉಪನಗರ ಭಾಂಡಪ್ ನಲ್ಲಿರುವ ರಾವುತ್ ಅವರ ಮೈತ್ರಿ ಬಂಗಲೆಯನ್ನು ತಲುಪಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶಿವಸೇನೆಯ ಉದ್ದವ್ ಠಾಕ್ರೆ ಪಾಳಯದಲ್ಲಿರುವ ರಾಜ್ಯಸಭಾ ಸದಸ್ಯ ಯಾವುದೇ ತಪ್ಪನ್ನು ಅಲ್ಲಗೆಳೆದಿದ್ದರೂ ರಾಜಕೀಯ ದ್ವೇಷದ ಕಾರಣದಿಂದ ತನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಇಡಿ ಕ್ರಮ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ರಾವುತ್ ಟ್ವೀಟ್ ಮಾಡಿದ್ದಾರೆ. ನಾನು ಸಾಯುತ್ತೇನೆ. ಆದರೆ ಶಿವಸೇನೆಯನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.