ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ತೆರೆದಗುಪ್ಪೆ ಗ್ರಾಮಸ್ಥರು ಶನಿವಾರ ಕುಣಿಗಲ್ ಸರ್ಕಾರಿ ಆಸ್ಪತ್ರೆ ಎದುರು ಶವ ಇರಿಸಿ ಪ್ರತಿಭಟನೆ ನಡೆಸಿದರು.
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿ ತೆರೆದಕುಪ್ಪೆ ಗ್ರಾಮದ ಪಲ್ಲವಿ ಎಂಬ ಮಹಿಳೆ ಮೃತ ದುರ್ದೈವಿ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕುಣಿಗಲ್ ಗೆ ಆಗಮಿಸಿ ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಆಗ ಪೊಲೀಸರ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜುಲೈ 6ರಂದು ಪಲ್ಲವಿಯನ್ನು ಹೆರಿಗೆಗೆಂದು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ವೈದ್ಯರು ಹಣವಿಲ್ಲದೆ ಹೆರಿಗೆ ಸಾಧ್ಯವಿಲ್ಲ ಎಂದು ಹೇಳಿದರೆಂದು, ಹಣ ಕೊಟ್ಟ ನಂತರ ಸಿಸೇರಿಯನ್ ಹೆರಿಗೆ ಮಾಡಿದರೆಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಆ ಮಹಿಳೆಗೆ ವಿಪರೀತ ರಕ್ತಸ್ರಾವವಾಗಿದ್ದರಿಂದ ಮೊದಲಿಗೆ ಆದಿಚುಂಚನಗಿರಿ ಆಸ್ಪತ್ರೆಗೆ ನಂತರ ಬೆಂಗಳೂರಿನ ಕೆಂಗೇರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಣಂತಿ ಸಂಬಂಧಿಕರು ಮತ್ತು ಪೋಷಕರು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಲ್ಲದೆ ಅಸ್ಪತ್ರೆ ಆಡಳಿತಾಧಿಕಾರಿ ಮೇಲೆಯು ಹಲ್ಲೆ ಯತ್ನಿಸಿದರೆಂದು ಮಾಧ್ಯಮಗಳು ವರದಿ ಮಾಡಿವೆ.