ದೇಶದಲ್ಲಿ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಬೆಂಗಳೂರಿನ ಆನಂದ ರಾವ್ ವೃತ್ತದ ಗಾಂಧೀ ಪ್ರತಿಮೆಯ ಬಳಿ ನಡೆದ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂವಿಧಾನಿಕ ಸಂಸ್ಥೆಗಳು ಇರುವುದೇ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಲು, ಬಿಜೆಪಿಯ ಯಾವುದೇ ನಾಯಕರ ಮೇಲೆ ಇಡಿ ದಾಳಿ ಮಾಡಿಲ್ಲ, ಬಂಧಿಸಿಲ್ಲ ಎಂದು ಹೇಳಿದರು.
ಸೋನಿಯಾ ಗಾಂಧಿ ಅವರು ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿದ್ದು ದೇಶದ ಎಲ್ಲಾ ಕಾಂಗ್ರೆಸ್ಸಿಗರು ಅವರಿಗೆ ಧೈರ್ಯ ತುಂಬುವ ಉದ್ದೇಶಕ್ಕಾಗಿ ಇಲ್ಲಿ ಸೇರಿದ್ದೇವೆ. ರಾಹುಲ್ ಗಾಂಧಿ ಅವರನ್ನು 50 ಗಂಟೆಗಳ ಕಾಲ ಸೋನಿಯಾ ಗಾಂಧಿ ಅವರನ್ನು ಮೊನ್ನೆ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರೂ ಅನಗತ್ಯ ಕಿರುಕುಳ ನಿಂತಿಲ್ಲ ಎಂದು ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕಾಂಗ್ರೆಸ್ ಮುಖವಾಣಿಯಾಗಿದ್ದು, ನೆಹರು ಅವರು ಅಧ್ಯಕ್ಷರಾಗಿದ್ದಾಗ ಇದನ್ನು ಆರಂಭಿಸಿದ್ದರು. ಈ ಸಂಸ್ಥೆಯ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿ ಎಂದು ಎಲ್ಲಿಯೂ ಹೇಳಿಲ್ಲ. ಆ ಪತ್ರಿಕೆ ಸಂಕಷ್ಟದಲ್ಲಿದ್ದಾಗ ಅಲ್ಲಿನ ಸಿಬ್ಬಂದಿಗೆ ವೇತನ ನೀಡಲು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ದೇಣಿಗೆ ರೂಪದಲ್ಲಿ ಹಣ ನೀಡಿದ್ದರು ಎಂದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಅರುಣ್ ಜೇಟ್ಲಿ ಅವರೇ ಈ ಪ್ರಕರಣದಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ಹೇಳಿದ್ದರು. ಆದರೂ ಈಗ ಈ ಪ್ರಕರಣವನ್ನು ಮತ್ತೆ ತೆರೆದಿದ್ದಾರೆ ಎಂದು ಟೀಕಿಸಿದರು.
ಅವರು ಏನೇ ಕಿರುಕುಳ ಕೊಟ್ಟರೂ ಜೈಲಿಗೆ ಹಾಕಿದರೂ ನಾವು ಜಗ್ಗುವುದಿಲ್ಲ. ನೆಹರು ಹಾಗೂ ಗಾಂಧೀಜಿ, ಸರ್ದಾರ್ ಪಟೇಲ್ ಅವರು ದೇಶಕ್ಕಾಗಿ ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಜೀವವನ್ನು ಲೆಕ್ಕಿಸದೆ ಬ್ರಿಟೀಷರ ಗುಂಡಿಗೆ ಎದೆಯೊಡ್ಡಿ ನಿಂತಿದ್ದರು ಎಂದು ಸ್ಮರಿಸಿದರು.
ದೇಶದ ಹಿತಕ್ಕಾಗಿ 10 ವರ್ಷಗಳ ಕಾಲ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರಿಗೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಅವರ ಕುಟುಂಬದವರು ಅಲಹಾಬಾದ್ ನಲ್ಲಿ 20 ಸಾವಿರ ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ದಾನ ಮಾಡಿದ್ದಾರೆ. ಇಂದು ನಾವೆಲ್ಲ ಅವರ ಜೊತೆ ಇದ್ದೇವೆ ಎಂದು ಹೇಳಿದರು.