ಅತಿಥಿ ಉಪನ್ಯಾಸಕರು ಕಾಲೇಜಿಗೆ ಗೈರುಹಾಜರಾಗಿ ವಿಶ್ವವಿದ್ಯಾಲಯದ ಕಾರ್ಯಗಳಲ್ಲಿ ಪಾಲ್ಗೊಂಡರೆ ಅಂತಹವರ ವೇತನವನ್ನು ಕಡಿತ ಮಾಡಲಾಗುವುದು ಎಂಬ ಕಾಲೇಜು ಶಿಕ್ಷಣ ಇಲಾಖೆಯ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅತಿಥಿ ಉಪನ್ಯಾಸಕರು ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯು ತಾರತಮ್ಯ ನೀತಿ ಅನುಸರಿಸುತ್ತಿದೆ. ಹಾಗಾಗಿ ವೇತನ ಸಹಿತ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದ್ದಾರೆ.
ಅತಿಥಿ ಉಪನ್ಯಾಸಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡರೆ ವೇತನವನ್ನು ಕಡಿತ ಮಾಡಲಾಗುತ್ತದೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನೊಂದು ಕಡೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಈ ಸೆಮಿಸ್ಟರ್ ನಿಂದ ಮೌಲ್ಯಮಾಪನ ಪ್ರತಿಗಳನ್ನು ಒಂದು ದಿನಕ್ಕೆ 30 ಪ್ರತಿಗಳನ್ನು ನೀಡಲಾಗುತ್ತಿತ್ತು. ಈಗ 45 ಪ್ರತಿಗಳಿಗೆ ಹೆಚ್ಚಿಸಲಾಗಿದೆ.
ಹಿಂದೆ 30 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದರೆ 1250 ರೂಪಾಯಿ ಸಿಗುತ್ತಿತ್ತು. ಈಗ 45 ಉತ್ತರ ಪತ್ರಿಕೆಗಳನ್ನು ನೀಡಿ ಒಂದು ಪ್ರತಿಗೆ 15 ರೂಗಳಿಂದ 9ರೂಗಳಿಗೆ ಕಡಿತಗೊಳಿಸಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಲಿದೆ ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಇತರೆ ವಿವಿಗಳು ನೀಡುತ್ತಿರುವಂತೆ ಡಿಎ 1200+ ಮತ್ತು ಪ್ರತಿ ಸ್ಕ್ರಿಪ್ಟ್ ಗೆ 20 ರೂಪಾಯಿ ನೀಡಬೇಕು. ಆದರೆ ತುಮಕೂರು ವಿವಿಯಲ್ಲಿ ಅರ್ಧದಷ್ಟು ಮಾತ್ರ ನೀಡುತ್ತಿದೆ. ಇದನ್ನು ಬೇರೆ ವಿವಿಗಳು ನೀಡುತ್ತಿರುವಂತೆಯೇ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ನಗರ ವ್ಯಾಪ್ತಿಯ ಹೊರಗಿನ ಕಾಲೇಜಿನ ಉಪನ್ಯಾಸಕರಿಗೆ ನೀಡುವಂತೆ ಡಿಎಯನ್ನು ನಗರ ವ್ಯಾಪ್ತಿಯ ಒಳಗಿನ ಕಾಲೇಜಿನ ಉಪನ್ಯಾಸಕರಿಗೂ ತಾರತಮ್ಯ ಇಲ್ಲದೆ ಸಮಾನವಾಗಿ ನೀಡಬೇಕು ಎಂದು ಕುಲಪತಿ ವೆಂಕಟೇಶ್ವರಲು ಅವರಿಗೆ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಿದ್ದಾರೆ.