ಸತ್ತು ಹೋಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಮರು ಜೀವ ನೀಡುವ ಮೂಲಕ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಆರೋಪಿಸಿದರು.
ಕಾಂಗ್ರೆಸ್ ವರಿಷ್ಠ ಸೋನಿಯಾ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಮೂಲಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಅರುಣ್ ಜೇಟ್ಲಿ ಸಚಿವರಾಗಿದ್ದ ಕಾಲದಲ್ಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಅದೊಂದು ಸತ್ತು ಹೋಗಿರುವ ಪ್ರಕರಣ. ಆದರೂ ಇಡಿಯನ್ನು ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.
ಗೋದ್ರಾ ಹತ್ಯಾಕಾಂಡ ನಡೆದಾಗ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದರು. ಅಮಿತ್ ಶಾ ಗೃಹ ಸಚಿವರಾಗಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಧರ್ಮವನ್ನು ಪಾಲಿಸುವಂತೆ ಹೇಳಿದ್ದರು. ಗೋದ್ರಾ ಹತ್ಯಾಕಾಂಡದ ಬಗ್ಗೆ ತನಿಖೆ ನಡೆದು ಸುಪ್ರೀಂಕೋರ್ಟ್ ಅಮಿತ್ ಶಾ ಅವರನ್ನು 2 ವರ್ಷ ಗಡಿಪಾರು ಮಾಡಿತ್ತು. ಇಂತಹ ಗಂಭೀರ ಪ್ರಕರಣಗಳನ್ನು ತನಿಖೆಗೊಳಪಡಿಸದೆ ಸತ್ತು ಹೋಗಿರುವ ಕೇಸನ್ನು ಕೆದಕುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರ ಇಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಸೋನಿಯಾ ಗಾಂಧಿ ಅವರಿಗೆ ಇಡಿಯಿಂದ ಪ್ರಶ್ನಿಸುವ ಮೂಲಕ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಟೀಕಿಸಿದರು.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನರ ಮನಸ್ಸನ್ನು ಬೇರಡೆಗೆ ಸೆಳೆಯಲು ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳ ಮುಖಂಡರ ಮೇಲೆ ಛೂ ಬಿಡಲಾಗುತ್ತಿದೆ. ಬೆಲೆ ಏರಿಕೆಯನ್ನು ತಡೆಗಟ್ಟಬೇಕಾದ ಕೇಂದ್ರ ಸರ್ಕಾರ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗುತ್ತಿಲ್ಲ. ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಫೀಕ್ ಅಹಮದ್, ಮಾಜಿ ಸಚಿವ ವೆಂಕಟರವಣಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಷಫಿ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.