ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಎನ್.ಡಿ.ಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಮೊದಲ ಮತ್ತು ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ದ್ರೌಪದಿ ಮುರ್ಮು 1349 ಮತಗಳನ್ನು, ಯಶವಂತ್ ಸಿನ್ಹಾ 537 ಮತಗಳನ್ನು ಪಡೆದಿದ್ದು ಎರಡು ಸುತ್ತುಗಳಲ್ಲೂ ದ್ರೌಪದಿ ಮುರ್ಮು ಮುನ್ನಡೆ ಕಾಯ್ದುಕೊಂಡಿದ್ದರು.
ಮೂರನೇ ಸುತ್ತಿನಲ್ಲೂ ದ್ರೌಪದಿ ಮುರ್ಮು 2161 ಮತಗಳನ್ನು ಹಾಗೂ ಯಶವಂತ್ ಸಿನ್ಹಾ 1058 ಮತಗಳನ್ನು ಪಡೆದಿದ್ದು, ಸಿನ್ಹಾ ಅವರನ್ನು ಭಾರೀ ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ.
ರಾಷ್ಟ್ರಪತಿ ಚುನಾವಣೆಯ ಮತಗಳ ಎಣಿಕೆಯಲ್ಲಿ ದ್ರೌಪದಿ ಮುರ್ಮು ಅತಿಹೆಚ್ಚು ಮತಗಳನ್ನು ಪಡೆದಿದ್ದು ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ ಬುಡಕಟ್ಟು ಮಹಿಳೆಯೊಬ್ಬರು ಉನ್ನತ ಸ್ಥಾನಕ್ಕೆ ಏರುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೂಲಕ ದೇಶದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.
ದೇಶದ ಸಂಸದರು ಮತ್ತು 4,025 ಶಾಸಕರು ಸೇರಿದಂತೆ 4,796 ಅರ್ಹ ಮತದಾರರಲ್ಲಿ ಶೇ.99 ಪ್ರತಿಶತಕ್ಕೂ ಹೆಚ್ಚು ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಉಪರಾಷ್ಟ್ರಪತಿ ಚುನಾವಣೆ – ಟಿಎಂಸಿ ಗೈರು
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡದೆ ತೃಣಮೂಲ ಕಾಂಗ್ರೆಸ್ ಪಕ್ಷ ಗೈರು ಹಾಜರಾಗಲಿದೆ. ಈ ಚುನಾವಣೆಯಲ್ಲಿ ಭಾಗಿಯಾಗದಿರಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತೀರ್ಮಾನಿಸಿದ್ದಾರೆ.