ತುಮಕೂರಿನಲ್ಲಿ ಶನಿವಾರ ಸುರಿದ ಮಳೆಗೆ ಚರಂಡಿಯಲ್ಲಿ ಕೊಚ್ಚಿಕೊಂಡು ಹೋದ ಆಟೋ ಚಾಲಕ ಒಂದು ದಿನ ಕಳೆದರೂ ಪತ್ತೆಯಾಗಿಲ್ಲ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕೊಚ್ಚಿಹೋದ ಚಾಲಕನಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಜುಲೈ 16ರಂದು ಅಪರಾಹ್ನ 3.30 ಸಮಯದಲ್ಲಿ ಮಳೆ ಸುರಿಯಿತ್ತಿದ್ದ ವೇಳೆ ತುಮಕೂರಿನ ದಾನ ಪ್ಯಾಲೇಸ್ ಸಮೀಪದ ಸೇತುವೆ ಬಳಿ ಹೋಗುತ್ತಿದ್ದಾಗ ಆಟೋ ಆಫ್ ಆಗುತ್ತದೆ. ಬಳಿಕ ಆಟೋದಿಂದ ಇಳಿದು ತಳ್ಳಿಕೊಂಡು ಹೋಗುತ್ತಾನೆ. ಆಗ ಮೊಬೈಲ್ ನೀರಿಗೆ ಬೀಳುತ್ತದೆ.
ಆಗ ಆಟೋವನ್ನು ಪಕ್ಕಕ್ಕೆ ನಿಲ್ಲಿಸಿ ಮೊಬೈಲ್ ಹುಡುಕಲು ಬರುತ್ತಾನೆ. ಅದೇ ಸಮಯಕ್ಕೆ ಟಿಪ್ಪರ್ ಲಾರಿ ಬಂದು ನೀರು ರಭಸದಿಂದ ಹರಿಯುತ್ತದೆ. ಆಗ ಆಟೋ ಚಾಲ ಅಮ್ಜದ್ ನೀರಿನಲ್ಲಿ ಬಿದ್ದು ಕಾಲುವೆ ಮೂಲಕ ಕೊಚ್ಚಿಹೋಗಿದ್ದ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೀರಿನಲ್ಲಿ ಕೊಚ್ಚಿಹೋದ ಅಮ್ಜದ್ ಅವರ ಪತ್ತೆಗಾಗಿ ಶೋಧ ನಡೆಸಿದರು. ಕತ್ತಲಾದ ಕಾರಣ ಶೋಧ ಕಾರ್ಯವನ್ನು ನಿಲ್ಲಿಸಿದ್ದರು.
ಮತ್ತೆ ಜುಲೈ 17ರಂದು ಬೆಳಗ್ಗೆಯಿಂದಲೇ ಶೋಧ ಕಾರ್ಯ ನಡೆಸುತ್ತಿದ್ದು ಇದುವರೆಗೂ ಅಮ್ಜದ್ ಮೃತದೇಹ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರೆದಿದೆ. ಬೆಂಗಳೂರಿನಿಂದ ಎನ್.ಡಿ.ಆರ್.ಎಫ್ ಸಿಬ್ಬಂದಿ ಆಗಮಿಸಿದ್ದು ಶೋಧ ನಡೆಸುತ್ತಿದ್ದಾರೆ.
ಸಮಾಜ ಸೇವಕ ತಾಜುದ್ದೀನ್ ಶರೀಫ್ ದಿನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿ ನೀರಿನಲ್ಲಿ ಕೊಚ್ಚಿಹೋಗಿರುವ ಆಟೋ ಚಾಲಕನ ಕುಟುಂಬಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಆಟೋ ಚಾಲಕ ಅಮ್ಜದ್ ಗೆ ಮೂವರು ಮಕ್ಕಳಿದ್ದು ಅವರು ಶಿಕ್ಷಣ ಮುಂದುವರಿಸಲು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅಮ್ಜದ್ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೋಧ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು ಎಂದು ಹೇಳಿದ್ದಾರೆ.