ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಆಟೋ ಚಾಲಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ತುಮಕೂರಿನ ದಾನ ಪ್ಯಾಲೇಸ್ ಸಮೀಪ ನಡೆದಿದೆ. ಚಾಲಕ ನಾಪತ್ತೆಯಾಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಚಾಲಕ ಆಟೋವನ್ನು ದಾನ ಪ್ಯಾಲೇಸ್ ನಿಂದ ಗುಬ್ಬಿ ಗೇಟ್ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಆಗ ಮಳೆ ಸುರಿಯುತ್ತಿತ್ತು. ಆಟೋವನ್ನು ಸೇತುವೆಯ ಸಮೀಪ ನಿಲ್ಲಿಸಿ ಮಳೆ ನೀರು ಹರಿಯುತ್ತಿರುವುದನ್ನು ವಿಡಿಯೋ ಮಾಡಲು ತೊಡಗಿದ್ದಾನೆ. ಈ ಸಂದರ್ಭದಲ್ಲಿ ರಭಸದಿಂದ ಬಂದ ಮಳೆ ನೀರಿಗೆ ಆ ಚಾಲಕ ಕೊಚ್ಚಿ ಹೋಗಿದ್ದಾನೆ.
ಮಳೆ ನೀರಿನಲ್ಲಿ ಕೊಚ್ಚಿ ಹೋದ ಚಾಲಕನನ್ನು ಮರಳೂರು ದಿಣ್ಣೆಯ ಅಮಜದ್ ಎಂದು ಗುರುತಿಸಲಾಗಿದೆ.
ಚಾಲಕ ನಾಪತ್ತೆಯಾಗಿರುವ ಸ್ಥಳದಲ್ಲಿ ಹಲವು ವರ್ಷಗಳಿಂದ ಎರಡು ಬದಿಯಲ್ಲಿ ಚರಂಡಿ ಬಾಯ್ತೆರೆದುಕೊಂಡಿದ್ದು ಅದರಲ್ಲಿ ಕೊಚ್ಚಿ ಹೋಗಿದ್ದಾನೆ. ಹೀಗೆ ಬಾಯ್ತೆರೆದಿರುವ ಚರಂಡಿಯ ನಿರ್ವಹಣೆಯ ಬಗ್ಗೆ ಯಾವ ಅಧಿಕಾರಿಗಳು ಗಮನಹರಿಸಿರಲಿಲ್ಲವೆಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಆಟೋ ಚಾಲಕ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.