30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನರ್ಮದಾ ನದಿಗೆ ಬಿದ್ದು 13ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮಧ್ಯಪ್ರದೇಶದ ಇಂದೋರ್ ನಿಂದ ನೆರೆಯ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಅಮಲ್ನೇರ್ ಗೆ ತೆರಳುತ್ತಿದ್ದ ವೇಳೆ ಬೆಳಗ್ಗೆ 9.30ರ ಸುಮಾರಿಗೆ ನದಿಗೆ ಜಾರಿ ಬಿದ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಧಾರ್ ಮತ್ತು ಖಾರ್ಗೋನ್ ಗಡಿಯ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ ನಂ.3ರಲ್ಲಿ ಅಪಘಾತ ಸಂಭವಿಸಿದೆ. ನದಿಗೆ ಬೀಳುವ ಮೊದಲು ಬಸ್ ಸೇತುವೆಯ ರೇಲಿಂಗ್ ಗೆ ಡಿಕ್ಕಿ ಹೊಡೆದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈಗಾಗಲೇ 13 ಮಂದಿ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿದ್ದು ಶೋಧ ಕಾರ್ಯ ನಡೆಸುತ್ತಿದೆ. ಇದುವರೆಗೆ 15 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಮಧ್ಯಪ್ರದೇಶದ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಬಸ್ಸಿನ ಚಾಲಕನನ್ನು ಚಂದ್ರಕಾಂತ್ ಏಕನಾಥ್ ಪಾಟೀಲ್ ಎಂದು ಗುರುತಿಸಲಾಗಿದೆ. ಪ್ರಕಾಶ್ ಶ್ರವಣ ಚೌಧರಿ ಕಂಡೆಕ್ಟರ್ ಅಗಿದ್ದಾರೆ. ಇಬ್ಬರು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ಜೂನ್ 12, 2012 ರಂದು ನಾಗ್ಪುರ ಗ್ರಾಮೀಣ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬಸ್ ಅನ್ನು ನೋಂದಾಯಿಸಲಾಗಿದೆ. ವಾಹನವು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಸೂಚಿಸುವ ಅದರ ಪ್ರಮಾಣಪತ್ರವು ಜುಲೈ 27, 2022ರಂದು ಮುಕ್ತಾಯಗೊಳ್ಳಲಿದೆ ಎಂದು ಹಿರಿಯ ಆರ್.ಟಿ.ಒ ಅಧಿಕಾರಿಯೊಬ್ಬರ ಹೆಸರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.
ಎಂಎಸ್ಆರ್.ಟಿ.ಸಿ ನಾಗರಿಕರಿಗಾಗಿ ಸಹಾಯವಾಣಿಯನ್ನು ಸ್ಥಾಪಿಸಿದೆ ಮತ್ತು ಅಪಘಾತದ ಬಗ್ಗೆ ಮಾಹಿತಿ ಪಡೆಯಲು 022-23023940 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಪ್ರಧಾನಿ ಕಾರ್ಯಾಲಯವು ಟ್ವೀಟ್ ಮಾಡಿದ್ದು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಗಳನ್ನು ಘೋಷಿಸಿದೆ.