Friday, October 18, 2024
Google search engine
Homeಮುಖಪುಟಬರಹಗಾರರಿಗೆ ಬೆದರಿಕೆ ಪತ್ರ - ಕ್ರಮಕ್ಕೆ ಸಿದ್ದರಾಮಯ್ಯ ಆಗ್ರಹ

ಬರಹಗಾರರಿಗೆ ಬೆದರಿಕೆ ಪತ್ರ – ಕ್ರಮಕ್ಕೆ ಸಿದ್ದರಾಮಯ್ಯ ಆಗ್ರಹ

ರಾಜ್ಯದ ಬರಹಗಾರರು, ಚಿಂತಕರು ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಪದೆಪದೇ ಜೀವ ಬೆದರಿಕೆಯ ಪತ್ರಗಳನ್ನು ದಾವಣಗೆರೆ, ಭದ್ರಾವತಿ, ಅಜ್ಜಂಪುರ ಮುಂತಾದ ಊರುಗಳಿಂದ ಪೋಸ್ಟ್ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕುಂ.ವೀರಭದ್ರಪ್ಪನವರಿಗೆ 6 ಪತ್ರ, ಬಂಜಗೆರೆ ಜಯಪ್ರಕಾಶ್ ಅವರಿಗೆ 5 ಪತ್ರ, ಬಿ.ಟಿ.ಲಲಿತಾ ನಾಯಕ್, ಬಿ.ಎಲ್.ವೇಣು, ಚಂದ್ರಶೇಖರ ತಾಳ್ಯ ಅವರಿಗೆ ತಲಾ 2 ಪತ್ರ, ಎಸ್.ಜಿ.ಸಿದ್ದರಾಮಯ್ಯ ಮತ್ತು ವಸುಂಧರ ಭೂಪತಿ ಅವರುಗಳಿಗೆ ಒಂದೊಂದು ಪತ್ರಗಳನ್ನು ಬರೆಯಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇವರುಗಳೆಲ್ಲಾ ಪ್ರಜಾತಾಂತ್ರಿಕ ಮೌಲ್ಯಗಳನ್ನು ಸಂವಿಧಾನದ ಆಶಯಗಳನ್ನು ರಕ್ಷಿಸುವ ಸಲುವಾಗಿ ಹೋರಾಡುತ್ತಿದ್ದಾರೆ. ಹಾಗಾಗಿ ಹಲವು ಬಾರಿ ಆಡಳಿತಾರೂಢ ಸರ್ಕಾರದ ವಿರುದ್ಧ ಮಾತನಾಡಲೇಬೇಕಾಗುತ್ತದೆ. ಇದಿಷ್ಟನ್ನೂ ಸಹಿಸದ ಕಿಡಿಗೇಡಿಗಳು ಜೀವಬೆದರಿಕೆಗಳನ್ನು ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅನೇಕ ಬಾರಿ ನನ್ನ ಸೋಷಿಯಲ್ ಮೀಡಿಯ ಖಾತೆಗಳಿಗೂ ಬಂದು ಹೀನಮನೋವೃತ್ತಿ ತೋರುವವರು ಇದ್ದಾರೆ ಎಂದು ಹೇಳಿದ್ದಾರೆ.

ನನಗೂ ಹಲವು ಬೆದರಿಕೆ ಪತ್ರಗಳು ಬಂದಿವೆ. ಸ್ವತಃ ಡಿಜಿಯವರಿಗೆ ನಾನು ಈ ಕುರಿತು ಮಾತನಾಡಿದ್ದೆ. ಇತ್ತೀಚೆಗೆ ಟಿವಿಯೊಂದರಲ್ಲಿ ವೀರೇಶ್ ಎಂಬಾತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನನಗೆ ಗುಂಡುಹಾರಿಸಬೇಕೆಂದು ಹೇಳಿಕೆ ಕೊಟ್ಟಿದ್ದ. ಈ ಬೆದರಿಕೆಯ ಹೇಳಿಕೆ ಹಾಗೂ ಪತ್ರಗಳ ಕುರಿತು ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಆದರೂ ಇದುವರೆಗೆ ಸರ್ಕಾರ ಎಫ್ಐಆರ್ ದಾಖಲಿಸಿಲ್ಲ. ಇದೇ ವಿಷಯಕ್ಕೆ ಹಲವು ಬಾರಿ ದೂರು ದಾಖಲಿಸಿದರೂ ಎಫ್ಐಆರ್ ಮಾಡಿ ತನಿಖೆ ನಡೆಸದಿರುವುದು ಸರ್ಕಾರದ ಬೇಜವಾಬ್ದಾರಿಯುತವಾದ ನಡವಳಿಕೆಯಾಗಿದೆ ಎಂದು ಟೀಕಿಸಿದ್ದಾರೆ.

ನಾಡಿನ ಬರಹಗಾರರು, ಚಿಂತಕರುಗಳಿಗೆ ಬಹಿರಂಗವಾಗಿ ಜೀವಬೆದರಿಕೆ ಪತ್ರಗಳನ್ನು ಬರೆದರೂ ಸರ್ಕಾರ ಸುಮ್ಮನಿದೆಯೆಂದರೆ ಭಿನ್ನಮತ ಮತ್ತು ಭಿನ್ನ ದನಿಗಳನ್ನು ದಮನಿಸಲು ಪ್ರಯತ್ನಿಸಲಾಗುತ್ತಿದೆ ಅಥವಾ ಪೊಲೀಸ್ ವ್ಯವಸ್ಥೇ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದರ್ಥ ಎಂದಿದ್ದಾರೆ.

ಈಗಾಗಲೇ ನಾಡಿನ ಪ್ರಖ್ಯಾತ ಚಿಂತಕರು ಹಾಗೂ ಬಸವ ತತ್ವದ ಅನುಯಾಯಿಗಳಾಗಿದ್ದ ಡಾ.ಎಂ.ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಇದೇ ಗೋಡ್ಸೆ ಸಂತತಿಯವರು ಹಾಗೂ ಮನು ಸಂಸ್ಕೃತಿಯ ಪ್ರತಿಪಾದಕರುಗಳು ಗುಂಡಿಟ್ಟು ಕೊಂದರು. ಕೊಲೆಗಾರರಲ್ಲಿ ಬಹುತೇಕರು ಬಿಜೆಪಿಯನ್ನು ಬೆಂಬಲಿಸುವ ಸನಾತನ ಸಂಸ್ಕೃತಿಯೆಂಬ ಸಂಘಟನೆಯ ಸದಸ್ಯರುಗಳಾಗಿದ್ದಾರೆಂಬ ಮಾಹಿತಿ ಇದೆ. ಈಗಷ್ಟೇ ಆ ಇಬ್ಬರು ಹುತಾತ್ಮ ಚಿಂತಕರನ್ನು ಕೊಂದವರ ವಿಚಾರಣೆ ಪ್ರಾರಂಭವಾಗಿದೆ. ಈ ಪ್ರಕರಣಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸರ್ವಜನಾಂಗದ ಶಾಂತಿಯ ತೋಟ ಎಂದು ಹೆಸರಾದ ಕನ್ನಡ ನಾಡಿನಲ್ಲಿ ಸಮರ್ಥವಾಗಿ ಕಾನೂನು ಮತ್ತು ಸುವ್ಯವಸ್ಥೇಯನ್ನು ನಿಭಾಯಿಸಬೇಕಾದ ತುರ್ತು ಅಗತ್ಯವಿದೆ. ಯಾಕೆಂದರೆ ನಾಡಿನಲ್ಲಿ ಪದೇಪದೇ ಕಾನೂನು ಸುವ್ಯವಸ್ಥೇ ಕುಸಿದು ಬೀಳುತ್ತಿದೆ ಎಂದು ಆರೋಪಿಸಿದ್ದಾರೆ.

ಆದ್ದರಿಂದ ಸರ್ಕಾರ ಕ್ರಿಯಾಶೀಲವಾಗಬೇಕು. ಬೆದರಿಕೆ ಪತ್ರಗಳನ್ನು ಬರೆಯುತ್ತಿರುವ ದುರುಳರನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷೆ ವಿಧಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ರಕ್ಷಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular