Friday, October 18, 2024
Google search engine
Homeಮುಖಪುಟಪಠ್ಯ ಪರಿಷ್ಕರಣೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ವಿಚಾರಗಳನ್ನು ತಿರುಚುವ ಕೆಲಸ - ಎಲ್. ಹನುಮಂತಯ್ಯ

ಪಠ್ಯ ಪರಿಷ್ಕರಣೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ವಿಚಾರಗಳನ್ನು ತಿರುಚುವ ಕೆಲಸ – ಎಲ್. ಹನುಮಂತಯ್ಯ

ಬಿಜೆಪಿಯು ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಮತ್ತು ಹೈದರಾಲಿ ಅವರ ಪಠ್ಯ ತೆಗೆಯುತ್ತೇವೆ ಎಂದು ಜನರಿಗೆ ನಂಬಿಸಿ ಬುದ್ಧ, ಬಸವ ಅಂಬೇಡ್ಕರ್, ಗಾಂಧಿ ಮತ್ತು ಕುವೆಂಪು ಅವರ ವಿಚಾರವನ್ನು ತಿರುಚುವ ಪ್ರಯತ್ನ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಆರೋಪಿಸಿದ್ದಾರೆ.

ಬಿಜೆಪಿ ಹೇಗೆ ನಮ್ಮ ದಾರಿ ತಪ್ಪಿಸುತ್ತಿದೆ ಎಂಬುದನ್ನು ನಾವು ಅರಿಯಬೇಕು. ಹಿಂದೂ ಮೂಲಭೂತವಾದ ಪಠ್ಯವನ್ನು ತಯಾರು ಮಾಡುವ ನಿರೀಕ್ಷೆ ಇತ್ತು. ಆದರೆ ಸತ್ಯದ ತಿರುಚುವಿಕೆ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದಾರೆ.

ನಮ್ಮ ಮಕ್ಕಳಲ್ಲಿ ಕಂದಾಚಾರಗಳನ್ನು ವಿರೋಧಿಸುವ ದೃಷ್ಟಿಕೋನಗಳು ಬರಬೇಕು. ಆದರೆ ಈಗಿನ ಪಠ್ಯದಲ್ಲಿ ಯಜ್ಞಯಾಗಾದಿಗಳ ಪುನರ್ ಪ್ರತಿಷ್ಠಾಪಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಸ್ತ್ರೀ ವಿರೋಧಿಯಾಗಿದೆ. ಗಂಡು ಹಾಗೂ ಹೆಣ್ಣು ಸಮಾನರು ಎಂಬ ಲಿಂಗ ಸಮಾನತೆ ಬಗ್ಗೆ ನಾವು ಮಕ್ಕಳಿಗೆ ಬೋಧನೆ ಮಾಡಬೇಕು. ಆದರೆ ಮಕ್ಕಳಿಗೆ 10ನೆ ತರಗತಿ ಪಠ್ಯದಲ್ಲಿ ಮಹಿಳಾ ನಿಂದನೆ ಅಂಶಗಳಿವೆ ಎಂದರು.

ಬಸವಣ್ಣನವರು ವೈದಿಕ ಮೌಢ್ಯಾಚಾರಣೆಗಳನ್ನು ವಿರೋಧಿಸಿ ದೇಹವೇ ದೇಗುಲ ಎಂಬ ವಿಚಾರಗಳು, ವಚನಕಾರರ ಅಂಶಗಳನ್ನು ಪರಿಷ್ಕರಣೆಯಲ್ಲಿ ಕೈಬಿಡಲಾಗಿದೆ. ಬಸವಣ್ಣನವರನ್ನು ವೀರಶೈವ ಧರ್ಮ ಸ್ಥಾಪಿಸಿದವರು ಎಂದು ಹೇಳದೆ ವೀರಶೈವ ಧರ್ಮ ಅಭಿವೃದ್ಧಿ ಪಡಿಸಿದರು ಎಂದು ಹೇಳಲಾಗಿದೆ. ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದವರೇ ಹೊರತು ವೀರಶೈವ ಧರ್ಮವನ್ನು ಅಭಿವೃದ್ಧಿಪಡಿಸಲಿಲ್ಲ ಎಂದು ಹೇಳಿದ್ದಾರೆ.

ಅಂಬೇಡ್ಕರ್ ವಿಚಾರದಲ್ಲಿ ಅವರು ಸಂವಿಧಾನಶಿಲ್ಪಿ ಎಂಬ ಅಂಶವನ್ನು ತೆಗೆದುಹಾಕಲಾಗಿದೆ. ಕೆಲವು ಹಿಂದೂ ಮೂಲಭೂತವಾದಿಗಳು ಅಂಬೇಡ್ಕರ್ ಅವರು ಕೇವಲ ಕರಡು ಸಮಿತಿ ಅಧ್ಯಕ್ಷರು. ಅವರು ಸಂವಿಧಾನ ಬರೆದಿಲ್ಲ ಎಂದು ವಾದಿಸುತ್ತಾರೆ. ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎಂದು ಒಪ್ಪಿದ ಕೋಟ್ಯಂತರ ಜನರಿದ್ದಾರೆ. ಇದರ ಉದ್ದೇಶ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಹೇಳುವುದನ್ನು ಸಹಿಲಾಗದೇ ಇರುವ ಮನಸ್ಥಿತಿಗಳು ಈ ಕೆಲಸ ಮಾಡಿವೆ. ಇದು ಅಪಾಯಕಾರಿ ಎಂದು ತಿಳಿಸಿದ್ದಾರೆ.

ಇಂತಹ ಪಠ್ಯವನ್ನೇ ಮುಂದುವರೆಸುವ ದುಸ್ಸಾಹಸಕ್ಕೆ ಸರ್ಕಾರ ಮುಂದಾಗಿದೆ. ಈಗಲಾದರೂ ಅದನ್ನು ಹಿಂಪಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.

ಮಾಜಿ ಶಿಕ್ಷಣ ಸಚಿವ ಬಿ.ಕೆ.ಚಂದ್ರಶೇಖರ್ ಮಾತನಾಡಿ ಮಕ್ಕಳಿಗೆ ಪ್ರಶ್ನೆ ಕೇಳುವ ಆತ್ಮವಿಶ್ವಾಸವನ್ನು ಮೂಡಿಸಬೇಕು. ಇಲ್ಲದಿದ್ದರೆ ಅದು ಶಿಕ್ಷಣವೇ ಅಲ್ಲ. ವಾದ ವಿವಾದಗಳು ಸೇರಿಕೊಳ್ಳಬೇಕು. ಆದರೆ ಇವುಗಳು ಬಿಜೆಪಿಯವರಿಗೆ ಸರಿಹೊಂದುವುದಿಲ್ಲ. ಹೆಡಗೇವಾರ್ ಅವರ ಭಾಷಣ ವ್ಯಕ್ತಿಪೂಜೆಗೆ ಸೀಮಿತವಾಗಿದೆ. ನೀವು ಒಬ್ಬರನ್ನು ಒಪ್ಪಿದ ಮೇಲೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಇದು ಪಠ್ಯ ಪುಸ್ತಕವಲ್ಲ. ಆರ್.ಎಸ್.ಎಸ್. ಬಿಜೆಪಿಯ ಗೈಡ್ ಪುಸ್ತಕವಾಗಿದೆ. ಇದರ ವಿರುದ್ಧ ನಾವು ಶಾಂತಿಯುತ ಹೋರಾಟವನ್ನು ಮುಂದುವರಿಸಲೇಬೇಕು ಎಂದು ಸಲಹೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular