ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿದ್ದು, ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಜಿನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಈಗ ನಡೆದಿರುವ ಬೆಳವಣಿಗೆ ಕರ್ನಾಟಕಕ್ಕೆ ಕಪ್ಪು ಚುಕ್ಕೆಯಾಗಿದೆ. ಚಿಕ್ಕಚಿಕ್ಕದಾಗಿ ಕಾಣುತ್ತಿರಬಹುದು. ಆದರೆ ಇದರಿಂದ ರಾಜ್ಯದ ಆಡಳಿತ ಹಾಗೂ ಘನತೆಗೆ ಮಸಿ ಬಳಿದಂತಾಗಿದೆ. ಈ ಸಮಯದಲ್ಲಿ ಜನಸಾಮಾನ್ಯರ ರಕ್ಷಣೆಗೆ ನ್ಯಾಯಾಂಗ ಬಂದಿದೆ. ಆದರೆ ರಾಜ್ಯದಲ್ಲಿ ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ ಎಂದರು.
ನ್ಯಾಯಮೂರ್ತಿಗಳು ತಮ್ಮ ಸ್ಥಾನಕ್ಕೆ ಕಂಟಕ ಬಂದಿರುವ ರೀತಿ ದುಗುಡ ಹೇಳಿಕೊಂಡಿದ್ದಾರೆ. ಪ್ರತಿ ಸಂದರ್ಭದಲ್ಲಿ ನ್ಯಾಯಾಲಯ ಏನು ಹೇಳಿದೆ. ಸರ್ಕಾರ ಏನು ಬಯಸಿದೆ. ಈ ಹಗರಣದಲ್ಲಿ ಮಾಹಿತಿ ನೀಡದೇ ಮುಚ್ಚಿಹಾಕಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದು ದಾಖಲೆಗಳಿಂದ ಜಗಜ್ಜಾಹೀರಾಗಿದೆ ಎಂದು ಹೇಳಿದ್ದಾರೆ.
545 ಪಿಎಸ್ಐ ಹುದ್ದೆಗಳಿಗೆ 1.20 ಲಕ್ಷ ಯುವಕರು ಅರ್ಜಿ ಹಾಕಿ ಅದರಲ್ಲಿ 52 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಸುಮಾರು 300 ಹುದ್ದೆಗಳ ನೇಮಕ ಅಕ್ರಮವಾಗಿ ಆಗಿದೆ. ಪಿಎಸ್ಐ ನೇಮಕ ಅಕ್ರಮದಲ್ಲಿ ಅಂಗಡಿ ಓಪನ್ ಆಗಿತ್ತು. ಉಪ್ಪಿನಂಗಡಿ ಓಪನ್ ಇದ್ದ ಕಾರಣಕ್ಕೆ ಅದನ್ನು ಕೊಳ್ಳಲು ಯುವಕರು ಹೋಗಿದ್ದರು. ಅಂಗಡಿ ತೆಗೆಯದಿದ್ದರೆ ಯುವಕರು ಹೋಗುತ್ತಿದ್ದರೆ? ಈ ಉಪ್ಪಿನಂಗಡಿ ಯಾರದ್ದು ಎಂಬ ತನಿಖೆ ಆಗಬೇಕು. ಈ ಅಕ್ರಮದಲ್ಲಿ ಶಾಮೀಲಾಗಿರುವ ದೊಡ್ಡವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ಎಡಿಜಿಪಿ ವಿಚಾರಣೆ ಮಾಡಿದ್ದು ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಬಂಧಿಸಿದ ಅರ್ಧಗಂಟೆಯಲ್ಲಿ ಆರೋಗ್ಯ ಪರೀಕ್ಷೆಗೆ ಕಳಿಸುತ್ತೀರಲ್ಲ. ನಿಮಗೆ ನಾಚಿಕೆ ಆಗುವುದೇ ಇಲ್ಲವೇ? ಯಾವುದೇ ವಿಚಾರಣೆ ಮಾಡಬೇಕಾದರೆ ಅವರ ಹೇಳಿಕೆ ಅವರ ಕೆಳ ಅಧಿಕಾರಿಗಳ ಹೇಳಿಕೆ ಸರಿಯಾಗಿದೆಯೇ ಇಲ್ಲವೇ? ಎಂದು ಸುದೀರ್ಘ ಚರ್ಚೆ ನಡೆಸಿ ದಾಖಲಾತಿ ಸಂಗ್ರಹಿಸಿದ ನಂತರ ಅವರನ್ನು ವೈದ್ಯರ ಪರೀಕ್ಷೆಗೆ ಕಳಿಸುವುದು ವಾಡಿಕೆ. ಕೋರ್ಟ್ ಹೇಳಿತೆಂದು ಅರ್ಧಗಂಟೆಯಲ್ಲಿ ಬಂಧಿಸಲಾಗಿದೆ ಎಂದರು.
ಈ ಪ್ರಕರಣದಲ್ಲಿ ಸುಮಾರು 300 ರಿಂದ 500 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಇದೆಲ್ಲದರ ಸಂಪೂರ್ಣ ವಿಚಾರಣೆ ಮಾಡದೇ ಅವರನ್ನು ಬಂಧಿಸಿ ವಿಚಾರಣೆ ಮುಕ್ತಾಯಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.


