ಮಹಾರಾಷ್ಟ್ರದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ಥಾಣೆಯಲ್ಲಿ ಗುಡ್ಡ ಕುಸಿದಿದೆ. ಪಕ್ಕದ ಪಾಲ್ಘರ್ ನಲ್ಲಿ ಮನೆಗಳು ಕುಸಿದು ಬಿದ್ದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಮಳೆಯಿಂದಾಗಿರುವ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಕ್ರಿಯಿಸಿದ್ದು, ಥಾಣೆ ಮತ್ತು ಪಾಲ್ಘರ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ಆಗಿರುವ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಮುಂಬೈನ ಕೊಲಾಬಾ ಮತ್ತು ಸಾಂತಾಕ್ರೂಜ್ ಗಳಲ್ಲಿ ಕ್ರಮವಾಗಿ 117 ಮಿಮೀ ಮತ್ತು 124 ಮಿಮೀಟರ್ ನಷ್ಟು ಮಳೆಯಾಗಿದೆ. ಮಂಗಳವಾರದಂದು ಇಡೀ ಕೊಂಕಣ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ.
ಮಂಗಳವಾರ ಮುಂಬೈನಲ್ಲಿ ಬಾರೀ ಮಳೆಯ ನಡುವೆಯೇ ಬೆಳಗ್ಗೆ ಕಾಂಪೌಂಡ್ ಗೋಡೆಯ ಒಂದು ಭಾಗ ಕುಸಿದು ಹೋಗಿದೆ.
ಬೆಳಗ್ಗೆ 9.40ರ ಸುಮಾರಿಗೆ ಗೋಡೆ ಕುಸಿದ ಘಟನೆ ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾಋ ಮನೆ ಖಾಲಿಯಾಗಿತ್ತು ಮತ್ತು ಮನೆಯ ಒಂದು ಭಾಗದ ಮೇಲೆ ಮರ ಬಿದ್ದ ನಂತರ ಗೋಡೆ ಕುಸಿದಿದ್ದು ಯಾವುದೇ ಪ್ರಾಣಹಾನಿ ದಾಖಲಾಗಿಲ್ಲ ಎಂದು ವರದಿಯಾಗಿದೆ.
ಮುಂಬೈನ ಸಿಯಾನ್ ಮತ್ತು ಚೆಂಚೂರ್ ನಲ್ಲಿ ತೀವ್ರ ಜಲಾವೃತವಾಗಿದ್ದು ಜನ-ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಬಸ್ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.


