ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಹಾಡಹಗಲೇ ದಲಿತ ಮುಖಂಡರೊಬ್ಬರನ್ನು ಹತ್ಯೆ ಮಾಡಿದ್ದ ಪ್ರಕರಣದ ಸಂಬಂಧ ಪೊಲೀಸರು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ. ರಾಹುಲ್ ಕುಮಾರ್ ಜೂನ್ 15ರಂದು ಗುಬ್ಬಿ ಪಟ್ಟಣದಲ್ಲಿ ದಲಿತ ಮುಖಂಡ ನರಸಿಂಹಮೂರ್ತಿಯವರ ಕೊಲೆ ನಡೆದಿತ್ತು. ಈ ಸಂಬಂಧ ತನಿಖಾ ತಂಡ ರಚಿಸಿತ್ತು. ಶೋಧ ಕಾರ್ಯ ನಡೆಸಿದ ಪೊಲೀಸರ ತಂಡ ಕನಕಪುರದ ಹಾರೋಹಳ್ಳಿ ಫಾರಂ ಹೌಸ್ ನಲ್ಲಿ ಅಡಗಿಕೊಂಡಿದ್ದ 13 ಮಂದಿ ಆರೋಪಿಗಳನ್ನು ಬಂಧಿಸಿದೆ ಎಂದು ಹೇಳಿದರು.
ಬಂಧಿತರನ್ನು ಧೀರಜ್, ನಾಗರಾಜ್, ಕಿರಣ್, ಕ್ಯಾಟ್ ರಾಜ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್.ಪಿ.ತಿಳಿಸಿದ್ದಾರೆ
ನರಸಿಂಹಮೂರ್ತಿ ಡಿಎಸ್ಎಸ್ ತಾಲ್ಲೂಕು ಸಂಚಾಲಕರಾಗಿದ್ದು ಜೂನ್ 15ರಂದು ಗುಬ್ಬಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಟೀ ಅಂಗಡಿ ಬಳಿ ಕುಳಿತು ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ದುಷ್ಕರ್ಮಿಗಳ ಗುಂಪು ನರಸಿಂಹಮೂರ್ತಿ ಅವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು.
ಆರೋಪಿಗಳು ಕೊಲೆ ಮಾಡಲು ಬಳಸಿದ್ದ ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ವಿಚಾರಣೆಯನ್ನು ನಡೆಸಿದ ನಂತರವೇ ಬಹಿರಂಗಪಡಿಸಲಾಗುವುದು ಎಂದು ಎಸ್.ಪಿ. ಹೇಳಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕೃತ್ಯಕ್ಕೆ ಕಾರಣವೇನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.