ಆಫ್ಘಾನಿಸ್ತಾನದ ದೂರದ ಗಡಿ ಪ್ರದೇಶದಲ್ಲಿ ರಾತ್ರಿಯಿಡೀ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಠ 1000 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಭೂಕಂಪನವು 5.9ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನಕ್ಕೆ ಸಹಸ್ರಾರು ಮಂದಿಯ ಪ್ರಾಣ ಹರಣವಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಮಳೆಯೂ ಜೋರಾಗಿ ಬೀಳುತ್ತಿದ್ದು ಎಲ್ಲಾ ಮನೆಗಳು ನಾಶವಾಗಿವೆ. ಜನರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.
ಪರ್ವತಗಳಲ್ಲಿ ತಲುಪಲು ಕಷ್ಟವಾದ ಪ್ರದೇಶಗಳಿಂದ ಸಾವು ನೋವು ಹೆಚ್ಚಾಗಿದ್ದು, ದೇಶದ ಸರ್ವೋಚ್ಛ ನಾಯಕ ಹಿಬತುಲ್ಲಾ ಅಖುಂಡ್ವಾದಾ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದಿಗ್ದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮತ್ತು ನೆರವು ಏಜೆನ್ಸಿಗಳು ನಮ್ಮ ಜನರಿಗೆ ಸಹಾಯ ಮಾಡುತ್ತವೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಇಂಟರ್ ಏಜೆನ್ಸಿ ಮೌಲ್ಯಮಾಪನ ತಂಡಗಳನ್ನು ಈಗಾಗಲೇ ಭೂಕಂಪನ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ ಎಂದು ಆಫ್ಘಾನಿಸ್ತಾನದ ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ಯುಎನ್ ಕಚೇರಿ ಟ್ವೀಟ್ ಮಾಡಿದೆ.
ಯೂರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ ವೆಬ್ ಸೈಟ್ ಗಳಲ್ಲಿ ಪೋಸ್ಟ್ ಮಾಡಲಾದ ಪ್ರತಿಕ್ರಿಯೆಗಳ ಪ್ರಕಾರ ಭೂಕಂಪನವು ಭೂಕಂಪನ ಕೇಂದ್ರದಿಂದ 480 ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಲಾಹೋರ್ ನವರೆಗೆ ದಾಖಲಾಗಿದೆ.


