ಹಣ, ಚಿನ್ನ, ಬೆಳ್ಳಿ ಕೊಟ್ಟು ಹಿಂಬಾಗಿಲ ಮೂಲಕ ವಿಧಾನ ಪರಿಷತ್ ಸದಸ್ಯರಾಗಿರುವ ಶರವಣ ಅವರು ಮೊದಲು ಸಾರ್ವತ್ರಿಕ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ಎಂದು ತುಮಕೂರು ಜಿಲ್ಲೆಯ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸವಾಲು ಹಾಕಿದ್ದಾರೆ.
ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಶ್ರೀನಿವಾಸ್ಬೆಂ ಬಿಬಿಎಂಪಿ ಚುನಾವಣೆ ಬರುತ್ತಿದೆ. ಅದರಲ್ಲಿ ಒಬ್ಬ ಕಾರ್ಪೋರೇಟರ್ ಅನ್ನು ಗೆಲ್ಲಿಸಿಕೊಂಡು ಬರಲಿ. ತಾಕತ್ತಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರಲಿ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ನಂಬಿಕೆ ಉಳಿಸಿಕೊಂಡಿರುವವರು, ಜನಸೇವೆ ಮಾಡಿದವರು ಚುನಾವಣೆಯಲ್ಲಿ ಗೆದ್ದು ಬರುತ್ತಾರೆ. ನಂಬಿಕೆ ಕಳೆದುಕೊಂಡವರು ಸೋಲುತ್ತಾರೆ. ಇದು ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದ್ದಾರೆ.
ಶರವಣ ನನಗೆ ಬುದ್ದಿ ಹೇಳುವ ಮೊದಲು ತಾನೇನೆಂಬುದನ್ನು ತಿಳಿದುಕೊಳ್ಳಬೇಕು. ಶರವಣ ಅಂಥವರಿಂದ ಬುದ್ದಿ ಹೇಳಿಸಿಕೊಳ್ಳುವಷ್ಟು ದಡ್ಡ ನಾನಲ್ಲ. ಚಿನ್ನ, ಬೆಳ್ಳಿ, ಹಣ ಕೊಟ್ಟು ಹಿಂಬಾಗಿಲ ಮೂಲಕ ಎಂಎಲ್ಸಿ ಆಗಿ ರಾಜಕೀಯಕ್ಕೆ ಬಂದಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದರೂ ಅವರು ಗೆದ್ದು ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಜನತಾ ದಳದ ಬಿ ಫಾರಂ ತೆಗೆದುಕೊಂಡು ಶಾಸಕರಾಗಿ ಆಯ್ಕೆಯಾದವರಲ್ಲ. ನಾನು ಸ್ವತಂತ್ರವಾಗಿ ಆಯ್ಕೆಯಾಗಿ ಬಂದವನು. ಶರವಣ ಬಿಬಿಎಂಪಿ ಚುನಾವಣೆಯಲ್ಲಿ ಒಂದು ಸೀಟನ್ನು ಗೆಲ್ಲಿಸಿಕೊಂಡು ಬರಲಿ, ಜೊತೆಗೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿ ಗೆದ್ದು ಬರಲಿ ಎಂದು ಸವಾಲು ಹಾಕಿದ್ದಾರೆ.